ಬೆಂಗಳೂರು:ಹಣಕಾಸು ಇಲಾಖೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ ೬ರಂದು 2026-27ನೇ ಸಾಲಿನ ರಾಜ್ಯ ಮುಂಗಡಪತ್ರ ಮಂಡಿಸಲು ತಯಾರಿ ನಡೆಸಿದ್ದಾರೆ.
ಅಧಿಕಾರ ಹಸ್ತಾಂತರ ವಿಚಾರ ಇನ್ನೂ ಇತ್ಯರ್ಥಗೊಳ್ಳದ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದಾಖಲೆಯ 18ನೇ ಬಜೆಟ್ ಮಂಡನೆ ಸಿದ್ಧತೆಯಲ್ಲಿದ್ದಾರೆ.
ತೆರೆಮರೆ ಕಸರತ್ತು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸಿರುವ ಬೆನ್ನಲ್ಲೇ ಸಿದ್ದರಾಮಯ್ಯ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಮುಂಗಡಪತ್ರ ತಯಾರಿಯಲ್ಲಿ ತೊಡಗಿದ್ದಾರೆ.
ವಿಧಾನಮಂಡಲದ ವಿಶೇಷ ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಇಂದು, ಶಕ್ತಿಭವನದಲ್ಲಿ ಉನ್ನತ ಶಿಕ್ಷಣ, ಅರಣ್ಯ ಸೇರಿದಂತೆ 10 ಇಲಾಖೆಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪೂರ್ವಭಾವಿ ಸಭೆ
ಕಳೆದ ಸೋಮವಾರದಿಂದಲೇ 10 ದಿನ ಸುದೀರ್ಘವಾಗಿ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳೊಂದಿಗೆ ಮುಂಗಡಪತ್ರ ಕುರಿತು ಪೂರ್ವಭಾವಿ ಸಭೆ ನಡೆಸಲು ಮುಖ್ಯಮಂತ್ರಿ ಕಾರ್ಯಾಲಯ ವೇಳಾಪಟ್ಟಿ ಪ್ರಕಟಿಸಿತ್ತು.
ಆದರೆ, ವಿಶೇಷ ಅಧಿವೇಶನ ಪೂರ್ವ ನಿಗದಿಗಿಂತ ಮೂರು ದಿನ ವಿಸ್ತರಣೆಗೊಂಡಿದ್ದರಿಂದ ಬಜೆಟ್ ತಯಾರಿ ಪ್ರಕ್ರಿಯೆ ಇಂದಿನಿಂದ ಆರಂಭವಾಯಿತು.

