ಬೆಂಗಳೂರು:ಮನರೇಗಾ ರದ್ದುಪಡಿಸಿ ವಿಬಿ-ಜಿ-ರಾಮ್-ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕುತಂತ್ರವನ್ನು ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 ಉತ್ಪದಾನೋತ್ತರ ಕೃಷಿ-ರೈತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಡಾ.ಮನಮೋಹನ್ ಸಿಂಗ್ ಸರ್ಕಾರ ಮನರೇಗಾ ಯೋಜನೆ ಜಾರಿಗೊಳಿಸಿತ್ತು ಎಂದರು.
ಕೇಂದ್ರ ನಿರ್ಧಾರದಂತೆ ಕಾಮಗಾರಿ
ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆ ಇದಾಗಿದೆ, ಗ್ರಾಮಸಭೆಗಳಲ್ಲಿ ಕಾಮಗಾರಿಗಳ ನಿರ್ಧಾರ ಆಗುತ್ತಿತ್ತು, ಈಗ ಕೇಂದ್ರ ಸರ್ಕಾರದ ಕೈಯಲ್ಲಿದೆ, ಕೇಂದ್ರ ನಿರ್ಧರಿಸಿದಂತೆ ಕಾಮಗಾರಿ, ಅನುದಾನ ನೀಡಲಾಗುತ್ತದೆ.
ರೈತರೆಲ್ಲ ಸೇರಿ, ಮನರೇಗಾ ಯೋಜನೆ ಮರುಸ್ಥಾಪನೆ ಹಾಗೂ ವಿಬಿ-ಜಿ-ರಾಮ್-ಜಿ ತಿರಸ್ಕರಿಸಬೇಕು, ಮನರೇಗಾ ಅಡಿ ಕಾರ್ಮಿಕರ ವೇತನವನ್ನು ಕೇಂದ್ರವೇ ಭರಿಸುತ್ತಿತ್ತು, ಆದರೆ ಈಗ ಕೇಂದ್ರ ಶೇ.60 ಅನುದಾನ ನೀಡುತ್ತಿದ್ದು, ರಾಜ್ಯ ಸರ್ಕಾರಗಳು ಶೇ.40 ರಷ್ಟು ಭರಿಸಬೇಕಿದೆ.
ಈ ಹಿಂದೆ 100 ಕೆಲಸದ ದಿನಗಳನ್ನು ಖಾತ್ರಿಪಡಿಸುತ್ತಿತ್ತು, ರಾಜ್ಯ ಸರ್ಕಾರಗಳ ಅಂಗೀಕಾರ ಇಲ್ಲದೇ, ಮನರೇಗಾ ರದ್ದುಪಡಿಸಿ ವಿಬಿ-ಜಿ-ರಾಮ್-ಜಿ ಜಾರಿಗೊಳಿಸಿದ್ದು, ಮಹಾತ್ಮಾಗಾಂಧಿ ಹೆಸರು ತೆಗೆಯಲಾಗಿದೆ.
ಭಾರತ ಸ್ವಾವಲಂಬನೆ
ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ, ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳಲ್ಲಿ ಬಹಳಷ್ಟು ಈಡೇರಿಸಲಾಗಿದೆ, ಅವುಗಳಲ್ಲಿ ಕೃಷಿ ಭಾಗ್ಯ ಯೋಜನೆ ಪ್ರಮುಖವಾಗಿದೆ.
ಬಿಜೆಪಿ ಅಧಿಕಾರಾವಧಿಯಲ್ಲಿ ಯೋಜನೆ ಸ್ಥಗಿತಗೊಂಡಿತ್ತು, ನಮ್ಮ ಸರ್ಕಾರ ಮತ್ತೆ ಕೃಷಿ ಭಾಗ್ಯ ಯೋಜನೆ ಮರುಸ್ಥಾಪಿಸಿದೆ, ಸುಮಾರು 200 ಕೋಟಿ ರೂ. ಅನುದಾನ ನೀಡಲಾಗಿದೆ.
ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಅತ್ಯಂತ ಪ್ರಮುಖವಾಗಿವೆ, ಅನ್ನಭಾಗ್ಯ ಯೋಜನೆಯಿಂದ ಬಡವರು ಉಳಿತಾಯದಲ್ಲಿ ಹೂಡಿಕೆ ಮಾಡಬಹುದಾಗಿದೆ, ಎಲ್ಲರಿಗೂ ಸಮಾನ ಅವಕಾಶ ನೀಡುವ ಉದ್ದೇಶದಿಂದ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

