ಬೆಂಗಳೂರು:ಗ್ಯಾರಂಟಿ ಯೋಜನೆಗಳು ಬದುಕು ಕಟ್ಟುತ್ತಿದ್ದು, ನೀವು ಸಂಪಾದಿಸುವ ಹಣವನ್ನು ಉಳಿತಾಯದಲ್ಲಿ ತೊಡಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಾನುಭವಿಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.
ಹಣ ಇದ್ದರೆ ಎಲ್ಲರೂ ನಿಮ್ಮನ್ನು ನೋಡುತ್ತಾರೆ, ಇಲ್ಲ ಎಂದರೆ ಯಾರೂ ನಿಮ್ಮ ಬಳಿ ಸುಳಿಯುವುದಿಲ್ಲ.
ಕಷ್ಟಕಾಲದಲ್ಲಿ ಬಳಸಿ
ದೈನಂದಿನ ಬದುಕಿಗೆ ಗ್ಯಾರಂಟಿ ಯೋಜನೆ ಸಹಕಾರಿ ಆಗಿರುವುದರಿಂದ ಹಣ ಉಳಿತಾಯ ಮಾಡಿ ಕಷ್ಟಕಾಲದಲ್ಲಿ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.
ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಇಂದು ಎಂಎಸ್‌ಐಎಲ್ ಚಿಟ್ಸ್ ಹೊಸ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಸಿಕ ಚೀಟಿಗೆ ಹಣ ಹಾಕಿ ಕಳೆದುಕೊಳ್ಳಬೇಡಿ ಎಂದರು.
ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್ ಫಂಡ್ ಯೋಜನೆ ಜಾರಿಗೊಳಿಸಿದೆ, ಇಲ್ಲಿ ನಿಮ್ಮ ಹಣ ಹೂಡಿಕೆ ಮಾಡಿದರೆ ಮೋಸ ಆಗುವುದಿಲ್ಲ.
ಬಂಡವಾಳ ಹೂಡಿಕೆಗೂ ಅನುಕೂಲ
ನೀವು ಪಾವತಿಸಿದ ಹಣಕ್ಕೆ ಒಳ್ಳೆಯ ಲಾಭ ಬರುತ್ತದೆ, ಕಷ್ಟ ಕಾಲದಲ್ಲಿ ಉಪಯೋಗ ಆಗಲಿದೆ, ಅಲ್ಲದೆ, ಯಾವುದಾದರೂ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೂ ಅನುಕೂಲವಾಗುತ್ತದೆ.
ಜಾತಿ-ವರ್ಗಗಳ ಬೇಧವಿಲ್ಲದೇ ಜಾರಿಯಾಗಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯದಿಂದ ಉಳಿತಾಯವಾಗುವ ಹಣವನ್ನು ಜನರು, ಅದಲ್ಲೂ ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು.
ಎಂಎಸ್‌ಐಎಲ್ ಸರ್ಕಾರಿ ಸಂಸ್ಥೆಯಾಗಿದೆ, ಜನರ ಹೂಡಿಕೆಗೆ ಭದ್ರತೆ ಒದಗಿಸುತ್ತದೆ, ತಮ್ಮ ಹೂಡಿಕೆಯ ಕೇವಲ ಶೇ.5ರಷ್ಟು ಲಾಭ ಪಡೆಯುವ ಸಂಸ್ಥೆ ಜನರ ಆರ್ಥಿಕ ಭದ್ರತೆಗೆ ನೆರವಾಗಲಿದೆ.
ವಹಿವಾಟು ಹೆಚ್ಚಿಸುವ ಗುರಿ
ಕೇರಳದಲ್ಲಿ 47,000 ಕೋಟಿ ರೂ. ವಹಿವಾಟು ನಡೆಯುತ್ತದೆ, ಕರ್ನಾಟಕದಲ್ಲಿ ಕೇವಲ 500 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತ 10,000 ಕೋಟಿ ರೂ.ಗೆ ವಹಿವಾಟು ಹೆಚ್ಚಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಶಿಕ್ಷಣ, ಆರೋಗ್ಯ, ಮದುವೆ, ಮನೆ ಖರೀದಿ ಹಾಗೂ ಹೂಡಿಕೆಗಳಿಗೆ ಉಳಿತಾಯ ಮೊತ್ತ ಸುಭದ್ರವಾಗಿರುವ ಗ್ಯಾರಂಟಿ ಇದೆ, ಹಣ ಗಳಿಸುವುದು ಹಾಗೂ ಸುಭದ್ರ ಹೂಡಿಕೆ ಮಾಡುವುದೂ ಮುಖ್ಯ ಎಂದರು.
ಮೈಕ್ರೋ ಫೈನಾನ್ಸ್ ಸಾಲದ ಸುಳಿಯಲ್ಲಿ ಅನೇಕ ಜನರು ಸಿಲುಕುತ್ತಾರೆ, ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶ 2025ರಲ್ಲಿ ರಕ್ಷಣೆ ನೀಡಲಾಗಿದೆ, ಸಾಲ ಪಡೆದು ಕಿರುಕುಳ ಅನುಭವಿಸುತ್ತಿರುವ ಜನರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.
ಎಂಎಸ್‌ಐಎಲ್ ಚಿಟ್ಸ್
ಇದೇ ಸಂದರ್ಭದಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸುಗಮ ಮತ್ತು ಪಾರದರ್ಶಕ ವ್ಯವಹಾರಕ್ಕೆಂದೇ ಎಂಎಸ್‌ಐಎಲ್ ಚಿಟ್ಸ್ ಸಾಫ್ಟ್‌ವೇರ್ ಮತ್ತು ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಸಂಸ್ಥೆ 27 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗುವುದು, ಮುಖ್ಯವಾಗಿ ಗ್ರಾಮೀಣ ಭಾಗ ಮತ್ತು ಮಹಿಳೆಯರ ಉಳಿತಾಯದ ಮೇಲೆ ನಮ್ಮ ಗಮನವಿದೆ, ಬ್ಯಾಂಕ್‌ಗಳಲ್ಲಿ ಕೊಡುವುದಕ್ಕಿಂತ ಹೆಚ್ಚಿನ ಲಾಭ ಸಿಗಲಿದೆ.
ಸುಗಮ ಚಿಟ್ ವ್ಯವಹಾರಕ್ಕಾಗಿ ಸಂಸ್ಥೆ ಏಜೆಂಟರನ್ನು ನೇಮಿಸಲಿದ್ದು, ಇದರಿಂದ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ, ಸ್ವಸಹಾಯ ಸಂಘಗಳ ಮಹಿಳೆಯರಿಗೆ ವಿಶೇಷ ಉಳಿತಾಯ ಯೋಜನೆಗಳನ್ನು ತರಲಾಗುವುದು.
ಸರ್ಕಾರಿ ನೌಕರರಿಗೆ ಆದ್ಯತೆ
ಸಂಘಗಳ ಸಖಿಯರೇ ಏಜೆಂಟರಾಗಿ ನೇಮಕಗೊಳ್ಳಲಿದ್ದಾರೆ, ಇವರಲ್ಲದೆ, ಹೋಟೆಲ್, ಕಿರಾಣಿ ಅಂಗಡಿಗಳು ಏಜೆಂಟ್ ರೀತಿ ಕಾರ್ಯನಿರ್ವಹಿಸಲು ವ್ಯವಸ್ಥೆ ರೂಪಿಸಲಾಗುವುದು, ಸರ್ಕಾರಿ ನೌಕರರ ಹೂಡಿಕೆಗೆ ಆದ್ಯತೆ ನೀಡಲಾಗುವುದು, ಒಟ್ಟಿನಲ್ಲಿ ಮನೆ ಮನೆಗೂ ಎಂಎಸ್‌ಐಎಲ್ ಚಿಟ್ ತಲುಪಿಸಲು ಪ್ರಯತ್ನ ನಡೆಯಲಿದೆ ಎಂದರು.
ಚಿಟ್‌ನಲ್ಲಿ ಹೂಡೊಕೆ ಮಾಡುವವರು, ತಮ್ಮ ಕಂತನ್ನು ಆಪ್ ಮೂಲಕ ಯುಪಿಐ, ವೆಬ್‌ಸೈಟ್ ಹಾಗೂ ಆನ್‌ಲೈನ್ ಮೂಲಕವೂ ಪಾವತಿಸಬಹುದಾಗಿದೆ, ಅನ್‌ಲೈನ್ ಮೂಲಕ ಬಿಡ್‌ನಲ್ಲೂ ಭಾಗವಹಿಸುವ ಸೌಲಭ್ಯಗಳಿವೆ.
ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ಎಲ್ಲ ವಸ್ತುಗಳು ಸಬ್ಸಿಡಿ ದರದಲ್ಲಿ ಸಿಗುವಂತೆ ಎಂಎಸ್‌ಐಎಲ್ ಸ್ಟೋರ್ ತೆರೆಯುವ ಚಿಂತನೆ ಇದ್ದು, ಸಾಧಕ-ಬಾಧಕ ಅಧ್ಯಯನ ಮಾಡಲಾಗುತ್ತಿದೆ, ಇದು ಸಾಕಾರಗೊಂಡರೆ 20 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

