ಬೆಂಗಳೂರು:ಜೆಡಿಎಸ್ ಮೈತ್ರಿ ಧರ್ಮವನ್ನು ಅತ್ಯಂತ ಗೌರವದಿಂದ ಪಾಲಿಸುತ್ತಿದ್ದೆ, ಬಿಜೆಪಿ ಹೈಕಮಾಂಡ್ ನಾಯಕರ ಮಾರ್ಗದರ್ಶನವೂ ಇದೆ, ಮಿತ್ರ ಪಕ್ಷಗಳ ನಾಯಕರು ಯಾರೇ ಆಗಿರಲಿ ಹೊರಗೆ ಮಾತನಾಡಬಾರದು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಗಳು ನಾಲ್ಕು ಗೋಡೆಗಳ ಒಳಗೆ ಚರ್ಚೆ ಆಗಬೇಕು, ಹಾದಿಬೀದಿಯಲ್ಲಿ ಚರ್ಚಿಸಿ ಇತ್ಯರ್ಥವಾಗುವ ವಿಚಾರ ಅಲ್ಲ, ಲೋಕಸಭೆ ಚುನಾವಣೆಯಿಂದಲೂ ಎರಡೂ ಪಕ್ಷಗಳ ಮೈತ್ರಿ ಮುಂದುವರೆದಿದ್ದು, ನಮ್ಮನ್ನ ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ ಎಂದರು.
ಎರಡು ಜಿಲ್ಲೆಯಲ್ಲಿ ಸಮಸ್ಯೆ
ಮೈತ್ರಿ ಸಮಸ್ಯೆ ಉದ್ಭವ ಆಗಿರುವುದು ಯಾವುದೋ ಎರಡು ಜಿಲ್ಲೆಯಲ್ಲಿ, ಅಲ್ಲಿನ ಮೂರ್ನಾಲ್ಕು ಜನ ಪ್ರಚಾರಕ್ಕಾಗಿ ಮಾತನಾಡಿದ್ದಾರೆ.
ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 140 ರಿಂದ 150 ಸ್ಥಾನ ಗೆಲ್ಲುತ್ತೆ, ನಾವು ಮೈತ್ರಿ ಧರ್ಮ ಪಾಲಿಸುತ್ತೇವೆ, ಲೋಕಸಭೆ ಗೆದ್ದಂತೆ ವಿಧಾನಸಭೆ ಚುನಾವಣೆಯಲ್ಲೂ ಗೆಲ್ಲುತ್ತೇವೆ, ಎನ್‌ಡಿಎ ಇತಿಹಾಸ ಸೃಷ್ಟಿಸಲಿದೆ, ಗೆಲುವಿನ ದಾಖಲೆ ಬರೆಯಲಿದೆ.
ಮೈತ್ರಿಗೆ ವಿರುದ್ಧವಾಗಿ ನಾವೆಲ್ಲಿಯೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ, ಕೆ.ಆರ್.ಪೇಟೆಯಲ್ಲಿ ಮಂಜು ಶಾಸಕರಾಗಿದ್ದು, ಮತ್ತೆ ಆರಿಸಿ ಬರಲು ಜನರ ಪ್ರೀತಿ ವಿಶ್ವಾಸ ಗಳಿಸಿ ಅಂತ ಹೇಳಿದ್ದನ್ನೇ ತಿರುಚಲಾಗಿದೆ.
ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ
ಅಭ್ಯರ್ಥಿಗಳ ಘೋಷಣೆ ಮಾಡೋದಕ್ಕೆ ನಾನು ಯಾರು, ಜನರ ವಿಶ್ವಾಸ ಉಳಿಸಿಕೊಂಡು ಹೋಗಿ ಅಂತ ಹೇಳುವುದರಲ್ಲಿ ತಪ್ಪೇನಿದೆ ಎಂದರು.
ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ 25 ವರ್ಷಗಳ ಬೆಳ್ಳಿಹಬ್ಬ ಆಚರಿಸಿಕೊಂಡಿದೆ, 50ಕ್ಕೂ ಶಾಸಕರಿದ್ದ ಪಕ್ಷವನ್ನು ರಾಜಕೀಯ ವೇದಿಕೆಯಾಗಿ ಉಪಯೋಗಿಸಿಕೊಂಡು ವೈಯಕ್ತಿಕ ಕಾರಣಗಳಿಗೆ ಬೇರೆ ಪಕ್ಷಗಳಿಗೆ ಹೋಗಿದ್ದಾರೆ.
ಜನತಾದಳದ ಶಕ್ತಿ ಏನು ಎಂಬುದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಗೊತ್ತಿದೆ, ಆದರೆ, ಮಾತನಾಡುವ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ಕಾರ್ಯಕರ್ತರ ಹಿತದೃಷ್ಟಿಯಿಂದ ಮೈತ್ರಿ
ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣಾ ಮೈತ್ರಿ ವಿಚಾರ ಚರ್ಚೆಗೆ ಬಂದಿಲ್ಲ, ಮೊದಲು ಚುನಾವಣೆಗಳು ನಡೆಯುವುದೇ ಎಂಬುದೇ ಗೊತ್ತಿಲ್ಲ, ಕಾರ್ಯಕರ್ತರ ಹಿತದೃಷ್ಟಿಯಿಂದ ಮೈತ್ರಿ ಆಗಬೇಕಾ ಅಥವಾ ಪ್ರತ್ಯೇಕ ಪಕ್ಷವಾಗಿ ಸ್ಪರ್ಧಿಸಬೇಕೇ ಎಂಬ ತೀರ್ಮಾನ ಮಾಡಲಾಗುವುದು ಎಂದರು.
ಕಾಂಗ್ರೆಸ್ ಶಾಸಕರು ವಿದೇಶ ಅಥವಾ ಡೆಲ್ಲಿ ಪ್ರವಾಸಕ್ಕೆ ಹೋಗುವ ಬದಲು, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಗ್ಯಾರಂಟಿಗಳನ್ನು ನಿಭಾಯಿಸಲಿ, ಗೃಹಲಕ್ಷ್ಮಿ ಹಣ 5 ತಿಂಗಳಿಂದ ಬಂದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 3 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ, 7,64,000 ಕೋಟಿ ರೂ. ಪೈಕಿ 5 ಲಕ್ಷ ಕೋಟಿ ರೂ. ಇವರ ಆಡಳಿತ ಕಾಲದಲ್ಲೇ ಆಗಿದೆ, ಇದರ ಚಿಂತನೆ ಮಾಡಬೇಕಾ, ಆಡಳಿತದ ಚಿಂತನೆ ಮಾಡಬೇಕಾ ಅಥವಾ ಪ್ರವಾಸಕ್ಕೆ ಹೋಗಬೇಕಾ ಎಂಬುದನ್ನು ನಿರ್ಧರಿಸಲಿ ಎಂದರು.

