ಬೆಂಗಳೂರು:ಕಾವೇರಿ, ಕೃಷ್ಣ ಸೇರಿದಂತೆ ರಾಜ್ಯಾದ್ಯಂತ ನದಿ ಪಾತ್ರಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ಹತ್ತಿಕ್ಕಲು ಸಿಬಿಐ ಇಲ್ಲವೇ ವಿಶೇಷ ತನಿಖಾ ದಳದಿಂದ ತನಿಖೆ ನಡೆಸಲು ರಾಜ್ಯ ಹೈಕೋರ್ಟ್ ಮುಂದಾಗಿದೆ.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪೀಠ, ಈ ವಿಚಾರದಲ್ಲಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
ಸರ್ಕಾರಕ್ಕೆ ನೋಟಿಸ್
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ ೭ಕ್ಕೆ ಮುಂದೂಡಿದೆ.
ಮಾಧ್ಯಮಗಳಲ್ಲಿನ ವರದಿ ಆಧರಿಸಿ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ವಿಭಾಗೀಯ ಪೀಠ, ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಅಕ್ರಮ ಮರಳು ಗಣಿಗಾರಿಕೆಯಲ್ಲಿ ರಾಜಕೀಯ ಪಕ್ಷಗಳ ಪ್ರಭಾವೀ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವರ ಅಸಹಾಯಕತೆ
ಸಚಿವರೇ ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಅಸಹಾಯಕತೆ ವ್ಯಕ್ತಪಡಿಸಿದರೆ, ಸರ್ಕಾರದಿಂದ ಅಕ್ರಮ ಚಟುವಟಿಕೆ ನಿಯಂತ್ರಣವಾಗಲಿದೆ ಎಂಬ ನಂಬಿಕೆ ನಮಗಿಲ್ಲ.
ಮರಳು ತೆಗೆಯಲು ಟೆಂಡರ್ಗಳನ್ನು ಆಹ್ವಾನಿಸಿದ್ದರೂ, ಅವುಗಳನ್ನು ತೆರೆಯಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ಉಲ್ಲೇಖಿಸಿವೆ.
ಅಕ್ರಮ ಗಣಿಗಾರಿಕೆಯಲ್ಲಿ ಭಾರೀ ಮೊತ್ತ ಕೈಬದಲಾವಣೆ ಆಗಿದ್ದು, ಇದರಲ್ಲಿ ದೊಡ್ಡ ತಿಮಿಂಗಿಲಗಳು ಭಾಗಿ ಆಗಿರುವುದರಿಂದ ಗಣಿಗಾರಿಕೆಯನ್ನು ಕ್ರಮಬದ್ಧಗೊಳಿಸಲು ಸಾಧ್ಯವಾಗಿಲ್ಲ.
ಕೃಷಿ ಭೂಮಿ ರಕ್ಷಣೆ
ಮಾಫಿಯಾಗೆ ಕಡಿವಾಣ ಹಾಕಿ, ರೈತರ ಕೃಷಿ ಭೂಮಿಯನ್ನು ಉಳಿಸಬೇಕಾದ ಜವಾಬ್ದಾರಿ ಇದೆ, ಇದಕ್ಕಾಗಿ ಕೇಂದ್ರ ತನಿಖಾ ಸಂಸ್ಥೆ ಇಲ್ಲವೇ ವಿಶೇಷ ತನಿಖಾ ದಳದಿಂದ ತನಿಖೆ ನಡೆಸುವ ಅಗತ್ಯವಿದೆ.
ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದರೂ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂಬುದನ್ನು ಮನಗಂಡು ನ್ಯಾಯಾಲಯದ ಮೇಲ್ವಿಚಾರಣೆಯಲ್ಲೇ ತನಿಖೆ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿಚಾರದಲ್ಲಿ ಸಾವು-ನೋವು ಆಗಿದೆ, ಮರಳು ಸಾಗಣೆಯಿಂದ ರಸ್ತೆಗಳು ಹಾಳಾಗಿ ಅಪಘಾತಗಳು ಸಂಭವಿಸಿವೆ, ಎಲ್ಲಕ್ಕೂ ಮಿಗಿಲಾಗಿ ಬೆಳೆಗಳ ಮೇಲೆ ಧೂಳು ತುಂಬಿ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುತ್ತಿದೆ.
ಶಾಸಕಿಗೇ ಜೀವ ಬೆದರಿಕೆ
ರಾಯಚೂರು ಜಿಲ್ಲೆಯ ಶಾಸಕಿ ಕರೆಮ್ಮ ಜಿ. ನಾಯಕ್ ಅವರ ಕ್ಷೇತ್ರದಲ್ಲಿನ ಅಕ್ರಮ ಮರಳುಗಾರಿಕೆ ವಿಷಯ ಪ್ರಸ್ತಾಪಿಸಿದ್ದಕ್ಕೆ ಮಾಫಿಯಾದಿಂದ ಜೀವ ಬೆದರಿಕೆ ಬಂದ ವರದಿಗಳನ್ನೂ ಗಮನಿಸಿದ್ದೇವೆ.
ಜಲ ಮೂಲ ಉಳಿಸಿ ನದಿಗಳ ಸಂರಕ್ಷಣೆಗೆ ಮತ್ತು ರೈತರ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ಹಾಗೂ ಅಪಘಾತಗಳನ್ನು ತಪ್ಪಿಸಲು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲೇಬೇಕಿದೆ ಎಂದು ಹೈಕೋರ್ಟ್ ಹೇಳಿದೆ.

