ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕುರಿತಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ವರಿಷ್ಠರಿಂದ ಸುಳಿವು ಸಿಕ್ಕಿರಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಮಹದೇವಪ್ಪ ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು ಆದ್ದರಿಂದ ದಲಿತ ಮುಖ್ಯಮಂತ್ರಿ ವಿಷಯ ಮಾತನಾಡುತ್ತಿದ್ದಾರೆ.
ನನಗೆ ಮಾಹಿತಿ ಇಲ್ಲ
ಮಹದೇವಪ್ಪ ಅವರ ಹೇಳಿಕೆ ನೋಡಿದೆ, ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ, ಅವರಿಗೆ ಮುಖ್ಯಮಂತ್ರಿ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಂತೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ನನಗೆ ಹೈಕಮಾಂಡ್‌ನಿಂದ ಯಾವುದೇ ಕರೆ ಬಂದಿಲ್ಲ, ನನ್ನನ್ನು ವರಿಷ್ಠರು ದೆಹಲಿಗೆ ಬರುವಂತೆಯೂ ಸೂಚಿಸಿಲ್ಲ, ಸದ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ ಎಂದು ಸ್ಪಷ್ಟಪಡಿಸಿದರು.
ಆದರೆ, ನಾನು, ಇಲಾಖಾ ಕೆಲಸ-ಕಾರ್ಯಗಳ ಮೇಲೆ ದೆಹಲಿಗೆ ಹೋಗಬೇಕಿದೆ, ಕೇಂದ್ರ ನಗರಾಭಿವೃದ್ಧಿ ಇಲಾಖೆ ನಗರಗಳ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರೂ. ನೀಡುತ್ತಿದೆ, ಇದರಲ್ಲಿ ನನ್ನ ಇಲಾಖೆ ವ್ಯಾಪ್ತಿಗೆ ಬರುವ ಬೆಂಗಳೂರು ಅಭಿವೃದ್ಧಿಗೆ ಒಂದಷ್ಟು ಹಣ ಪಡೆಯಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೆರಳಲಿದ್ದೇನೆ, ಉಳಿದ ವಿಚಾರ ನನಗೆ ಗೊತ್ತಿಲ್ಲ.
“ಅವರು ದೊಡ್ಡವರು”
ಡಾ.ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ “ಅವರು ದೊಡ್ಡವರು” ಎಂದರು.
ನಾನು, ಸತೀಶ್ ಜಾರಕಿಹೊಳಿ ಸಮಾನ ಮನಸ್ಕರು, ಪಕ್ಷದ ವಿಚಾರವಾಗಿ ವಾರಕ್ಕೊಮ್ಮೆ ಚರ್ಚೆ ಮಾಡುತ್ತೇವೆ, ಅವರು ನಮ್ಮ ಹಿರಿಯ ನಾಯಕರು, ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೂ ಪಕ್ಷದ ಬಗ್ಗೆ ಅಪಾರವಾದ ಚಿಂತನೆ ಇದೆ, ನಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಯೋಜನೆ ತಯಾರು ಮಾಡುತ್ತಿದ್ದೇವೆ.
ಸತೀಶ್ ಜಾರಕಿಹೊಳಿ ಅವರು ಗೊಂದಲ ಬಗೆಹರಿಯುವಂತೆ ಕಾಣುತ್ತಿದೆ ಎಂದಿರುವ ಬಗ್ಗೆ ನಾನು ಪತ್ರಿಕೆಯಲ್ಲಿ ನೋಡಿದೆ, ಇದರ ಹೊರತಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ಹೊಸ ಪೀಳಿಗೆ, ಹೊಸ ಆಲೋಚನೆ
ನೂತನ ಶಾಸಕರು ಕನಿಷ್ಠ 5 ಮಂತ್ರಿ ಸ್ಥಾನ ಹೊಸಬರಿಗೆ ನೀಡಬೇಕು ಎಂದು ಹೈಕಮಾಂಡ್‌ಗೆ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿ, ಹೊಸ ಪೀಳಿಗೆ, ಹೊಸ ಆಲೋಚನೆ ಬರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡಿರಲು ಸಾಧ್ಯ, ಈ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ, ನನಗೆ ಅವರ ಪತ್ರ ತಲುಪಿಲ್ಲ.
ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ, ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರಾಗದೇ ಮುಖ್ಯಮಂತ್ರಿ ಆಗಲಿಲ್ಲವೇ, ಶಾಸಕರು ಕೇಳುವುದರಲ್ಲಿ ತಪ್ಪೇನಿಲ್ಲ, ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯಾದವರಲ್ಲಿ ನಾನೂ ಒಬ್ಬ.
ನಾನು ಸಚಿವನಾಗಿ 36 ವರ್ಷವಾಗಿದೆ, ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂ ಇದ್ದೇನೆ, ಹೊಸಬರನ್ನು ನಾವು ತಯಾರು ಮಾಡಬೇಕಲ್ಲ, ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಕೆಲವರು ದೆಹಲಿಗೆ ಹೋಗುತ್ತಾರೆ
ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ, ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ, ಅವರು ಸಂಚಿವ ಸಂಪುಟ ವಿಸ್ತರಣೆ ಮಾಡುವ ಕಾರಣಕ್ಕೆ ಕೆಲವರು ಪತ್ರ ಬರೆಯುತ್ತಾರೆ, ದೆಹಲಿಗೆ ಹೋಗುತ್ತಾರೆ, ಹೊರಗಡೆ ಹೋಗುತ್ತಾರೆ, ಅವರಿಗೂ ಆಸೆ ಇರುತ್ತದೆ.
ನಾಯಕತ್ವ ಬದಲಾವಣೆ ಸೇರಿದಂತೆ ಕೆಲವು ರಾಜಕೀಯ ವಿಷಯಗಳ ಬಗ್ಗೆ ಸಚಿವರುಗಳು ಪದೇ ಪದೇ ಪ್ರಸ್ತಾಪ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕ್ರಮ ಕೈಗೊಳ್ಳಬೇಕು.
ಪಕ್ಷದ ರಾಜ್ಯಾಧ್ಯಕ್ಷನಾಗಿ ವರಿಷ್ಠರಿಗೆ ಎಲ್ಲಾ ಮಾಹಿತಿಗಳನ್ನು ಕಾಲಾನುಕಾಲಕ್ಕೆ ಕೊಡುವುದಷ್ಟೇ ನನ್ನ ಕೆಲಸ, ಸಚಿವರ ಬಾಯಿಗೆ ಬೀಗ ಹಾಕಿಸುವ ಅಧಿಕಾರ ನನಗಿಲ್ಲ, ಅದು ಇರುವುದು ಮುಖ್ಯಮಂತ್ರಿ ಅವರಿಗೆ ಮಾತ್ರ.
ಮುಖ್ಯಮಂತಿಯೇ ಗಮನಹರಿಸಬೇಕು
ಯಾವ ಸಚಿವರು ಏನು ಹೇಳಿದ್ದಾರೆ ಎಂಬುದು ನನಗೆ ತಿಳಿಯದು, ಇದೆಲ್ಲದರ ಬಗ್ಗೆ ಮುಖ್ಯಮಂತಿಯೇ ಗಮನಹರಿಸಬೇಕು ಮತ್ತು ಅವರುಗಳ ಬಾಯಿ ಮುಚ್ಚಿಸುವುದು ಅವರಿಗೆ ಬಿಟ್ಟ ವಿಷಯ ಎಂದರು.
ಕೆಲವು ಶಾಸಕರು ಅಧಿಕಾರ ಹಸ್ತಾಂತರ ಆಗುತ್ತದೆ, ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ, ಅವರನ್ನು ವರಿಷ್ಠರು ದೆಹಲಿಗೆ ಕರೆದಿದ್ದಾರೆ ಎಂದೆಲ್ಲಾ ಸಾರ್ವಜನಿಕವಾಗೇ ಹೇಳಿಕೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಏನನ್ನೂ ಉತ್ತರಿಸದೆ ತೆರಳಿದರು.

