ನವದೆಹಲಿ:ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನ್ಯಾಯಾಂಗ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿರುವ ಪಠ್ಯಪುಸ್ತಕವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ.
ಮುದ್ರಿತಗೊಂಡಿರುವ ಪಠ್ಯಪುಸ್ತಕಗಳನ್ನು ಮುಟ್ಟುಗೋಲಿಗೆ ಆದೇಶ ನೀಡಿರುವುದಲ್ಲದೆ, ಡಿಜಿಟಲ್ ಪ್ರತಿಗಳನ್ನು ತೆಗೆದುಹಾಕುವಂತೆ ಸೂಚಿಸಿದೆ.
ತಪ್ಪಿದಲ್ಲಿ ಗಂಭೀರ ಕ್ರಮ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ತತ್‌ಕ್ಷಣದಿಂದಲೇ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ತಪ್ಪಿದಲ್ಲಿ ಗಂಭೀರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಎನ್‌ಸಿಇಆರ್‌ಟಿಯ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ನ್ಯಾಯಾಂಗ ಭ್ರಷ್ಟಾಚಾರ ವಿಚಾರವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ, ಈ ಪ್ರಕರಣ ವಕೀಲ ಸಮುದಾಯ ಮತ್ತು ನ್ಯಾಯಾಧೀಶರ ವರ್ಗ ಎರಡನ್ನೂ ವಿಚಲಿತರನ್ನಾಗಿ ಮಾಡಿದೆ ಎಂದಿದ್ದಾರೆ.
ನ್ಯಾಯಾಂಗದ ಘನತೆ ಕುಗ್ಗಿಸಲು ಉದ್ದೇಶ ಪೂರ್ವಕವಾಗಿ ನಡೆಸಲಾದ ಕೃತ್ಯ ಎಂದಿರುವ ಪೀಠ, ಇಂತಹ ದುಷ್ಕೃತ್ಯ ಕ್ರಿಮಿನಲ್ ನ್ಯಾಯಾಂಗನಿಂದನೆ ವ್ಯಾಪ್ತಿಗೆ ಬರುತ್ತದೆ ಎಂದಿದೆ.
ಎನ್‌ಸಿಇಆರ್‌ಟಿಗೆ ನೋಟಿಸ್
ಎನ್‌ಸಿಇಆರ್‌ಟಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ, ಈ ಕುರಿತು ತನಿಖೆ ನಡೆಸಲು ನ್ಯಾಯಾಲಯ ಬಯಸುತ್ತದೆ.
ಇದನ್ನು ನಿಯಂತ್ರಿಸದಿದ್ದರೆ ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಹಾಳು ಮಾಡುತ್ತದೆ, ಸಂಬಂಧಪಟ್ಟವರನ್ನು ಶಿಕ್ಷೆಗೆ ಒಳಪಡಿಸದೆ ಬಿಡುವುದಿಲ್ಲ ಎಂದು ಎಚ್ಚರಿಸಿದೆ.
ಮುಖ್ಯನಾಯಮೂರ್ತಿ ಸೂರ್ಯಕಾಂತ್, ನ್ಯಾಯಾಂಗ ಸಂಸ್ಥೆಯನ್ನು ದೂಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದರು.
ಸಂವಿಧಾನದ ಮೇಲೆ ದಾಳಿ
ನ್ಯಾಯಮೂರ್ತಿ ಜೊಯಾಮಲ್ಯ ಬಾಗ್ಚಿ, ಇದು ಸಂವಿಧಾನದ ಮೂಲ ರಚನೆ ಮೇಲೆ ನಡೆಸಿದ ದಾಳಿ ಎಂದು ಕಿಡಿಕಾರಿದರು.
“ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ” ಎಂಬ ಅಧ್ಯಾಯದ ಭಾಗವಾಗಿ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ವಿಷಯವನ್ನು ಪುಸ್ತಕ ಒಳಗೊಂಡಿದೆ ಎಂಬುದಾಗಿ ಆಂಗ್ಲ ದಿನಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.
ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ಮತ್ತು ನ್ಯಾಯಾಧೀಶರ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಬಾಕಿ ಉಳಿದಿವೆ ಎಂದು ಅಧ್ಯಾಯದಲ್ಲಿ ಉಲ್ಲೇಖಿಸಲಾಗಿತ್ತು.
ಗಂಭೀರ ಕಳವಳಕಾರಿ
ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿರಿಯ ವಕೀಲ ಕಪಿಲ್ ಸಿಬಲ್, 8ನೇ ತರಗತಿ ವಿದ್ಯಾರ್ಥಿಗಳಿಗೆ ನ್ಯಾಯಾಂಗದ ಭ್ರಷ್ಟಾಚಾರ ಬೋಧಿಸುವುದು ಗಂಭೀರ ಕಳವಳಕಾರಿ ಸಂಗತಿ ಎಂದರು.
ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಪಠ್ಯದಲ್ಲಿ ನ್ಯಾಯಾಂಗದ ಭ್ರಷ್ಟಾಚಾರವನ್ನೇ ಆಯ್ದು ಟೀಕಿಸಲಾಗಿದೆ, ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆಗಳಿದ್ದರೂ ನ್ಯಾಯಾಂಗವನ್ನೇ ಪ್ರತ್ಯೇಕವಾಗಿ ಬಿಂಬಿಸಲಾಗಿದೆ ಎಂದು ಆಕ್ಷೇಪಿಸಿದರು.

