ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧರಿಸಿದೆ.
ಈ ಸುಳಿವು ದೊರೆತ ಹಿನ್ನೆಲೆಯಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹುಟ್ಟು ಹಬ್ಬದ ನೆಪದಲ್ಲಿ ನಿನ್ನೆ ರಾತ್ರಿ ಸಂಭ್ರಮ ಆಚರಿಸಿದ್ದಾರೆ.
ವಿಳಂಬ ಮಾಡದೆ ನಾಯಕತ್ವ
ಬಳ್ಳಾರಿ ರಸ್ತೆಯ ಪಂಚತಾರಾ ಹೋಟೆಲ್‌ನಲ್ಲಿ ಸೇರಿದ್ದ 40ಕ್ಕೂ ಹೆಚ್ಚು ಶಾಸಕರು, ಪಕ್ಷದ ಆಂತರಿಕ ವಿಷಯಗಳ ಕುರಿತು ಚರ್ಚಿಸಿ, ವಿಳಂಬ ಮಾಡದೆ, ನಾಯಕತ್ವ ಬದಲಾವಣೆ ಆಗಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಬಜೆಟ್‌ಗೂ ಮುನ್ನವೇ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ, ಬೇಕಿದ್ದರೆ ನಾವು 40-50 ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಆಗ್ರಹಿಸೋಣ ಎಂದು ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪ ಇಟ್ಟಿದ್ದಾರೆ.
ವರಿಷ್ಠರು ಈಗಾಗಲೇ ತೀರ್ಮಾನ ಕೈಗೊಂಡಾಗಿದೆ, ನಾವು ನಿಯೋಗ ಹೋಗಿ ಏನೂ ಮಾಡಲಾಗದು ಎಂದಿರುವ ಸಿ.ಪಿ.ಯೋಗೇಶ್ವರ್, ಒತ್ತಡ ತಂದರೆ ತಕ್ಷಣವೇ ಅಧಿಕಾರ ದೊರೆಯುತ್ತದೆ ಎನ್ನುವುದಾದರೆ 70-80 ಶಾಸಕರೇ ಹೋಗಬಹುದು.

ಅಗತ್ಯ ಬಿದ್ದಲ್ಲಿ ದೆಹಲಿಗೆ
ಆದರೆ, ಇದರಿಂದ ಏನೂ ಪ್ರಯೋಜನ ಆಗುವುದಿಲ್ಲ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಎಲ್ಲರೂ ಸೇರಿ ಸೋಮವಾರ ಭೇಟಿ ಮಾಡೋಣ, ಅವರ ಸಲಹೆ-ಸೂಚನೆ ಪಡೆದು ಅಗತ್ಯ ಬಿದ್ದಲ್ಲಿ ದೆಹಲಿಗೆ ಹೋಗೋಣ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಾಲಕೃಷ್ಣ, ನಾಯಕತ್ವ ಬದಲಾವಣೆಗೆ ವರಿಷ್ಠರು ತೀರ್ಮಾನ ಮಾಡಿಯಾಗಿದೆ, ಅದು ಯಾವಾಗ ಎಂಬ ದಿನಾಂಕ ಪ್ರಕಟಿಸಬೇಕಷ್ಟೆ.
ನನಗಿರುವ ಮಾಹಿತಿಯಂತೆ ಸಿದ್ದರಾಮಯ್ಯ ಕರೆದಿರುವ ಬಜೆಟ್ ಅಧಿವೇಶನದ ನಂತರವೇ ಎಲ್ಲಾ ಗೊಂದಲಕ್ಕೆ ವರಿಷ್ಠರು ತೆರೆ ಎಳೆಯಲಿದ್ದಾರೆ, ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವುದು ಖಚಿತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಯೋಗೇಶ್ವರ್ ನಾಯಕತ್ವ
ಬೇಕಿದ್ದರೆ, ಯೋಗೇಶ್ವರ್ ನಮಗೆಲ್ಲಾ ಹಿರಿಯರು ಅವರ ನಾಯಕತ್ವದಲ್ಲೇ ಮುಂದೆ ನಾವೇನು ಮಾಡಬೇಕೆಂಬ ಬಗ್ಗೆ ಅವರೇ ಹೇಳಬೇಕು ಎಂದಿದ್ದಾರೆ.
ನಾವು ಪದೇ ಪದೇ ಊಟಕ್ಕೆ ಸೇರುವುದರಿಂದ ಏನೂ ಪ್ರಯೋಜನ ಇಲ್ಲ, ಹೈಕಮಾಂಡ್‌ನಿಂದ ಬಂದಿರುವ ಸಂದೇಶ ಏನೆಂಬುದನ್ನು ಸುರೇಶ್ ಅವರನ್ನು ಭೇಟಿ ಮಾಡಿ ಖಚಿತಪಡಿಸಿಕೊಂಡು ಮುಂದೆ ತೀರ್ಮಾನ ಕೈಗೊಳ್ಳೋಣ, ಸದ್ಯಕ್ಕೆ ದುಡುಕುವುದು ಬೇಡ ಎಂದಿದ್ದಾರೆ.
ಇದಕ್ಕೆ ಮಂಡ್ಯದ ರವಿ ಗಣಿಗ ಧ್ವನಿಗೂಡಿಸಿ, ಬರುವ ಸೋಮವಾರವೇ ಎಲ್ಲರೂ ಸೇರಿ ಸುರೇಶ್ ಅವರನ್ನು ಭೇಟಿ ಮಾಡುವ ಎಂಬ ತೀರ್ಮಾನ ಕೈಗೊಂಡರು.
ಬಾಲಕೃಷ್ಣ ಹುಟ್ಟು ಹಬ್ಬ ನೆಪವಷ್ಟೆ, ಶಿವಕುಮಾರ್ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡಬೇಕಿತ್ತು, ಈ ನೆಪದಲ್ಲಿ ರಾಜಕೀಯ ಚರ್ಚೆ ನಡೆಸಿದ್ದಲ್ಲದೆ, ಅವರೇ ಶಾಸಕರ ಜೊತೆ ಇರುವ ವಿಭಿನ್ನ ಫೋಟೋ ಹಂಚಿಕೊಂಡಿದ್ದಾರೆ.

