ಬೆಂಗಳೂರು:ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಕದನದಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ವಿಧಾನಸಭಾ ಸದಸ್ಯರು, ಅಧಿಕಾರಿಗಳು, ಪ್ರಭಾವೀ ರಾಜಕಾರಣಿಗಳು ಹಾಗೂ ಕುಟುಂಬ ವರ್ಗದವರು ಸಂಘರ್ಷ ಪ್ರದೇಶದಲ್ಲಿ ಸಿಲುಕಿದ್ದಾರೆ.
ಚಲುವರಾಯಸ್ವಾಮಿ ಮತ್ತು ಅಧಿಕಾರಿಗಳು ಇಂಗ್ಲೆಂಡ್‌ನ ನ್ಯೂಕ್ಯಾಸೆಲ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಪ್ರದೇಶಗಳ ಪ್ರವಾಸದಲ್ಲಿದ್ದಾರೆ.
ಬರಲು ಸಾಧ್ಯವಾಗುತ್ತಿಲ್ಲ
ಇವರು ನಾಳೆ, ಮಂಗಳವಾರ ದುಬೈ ಮೂಲಕ ನಗರಕ್ಕೆ ಹಿಂತಿರುಗಬೇಕಿತ್ತು, ಆದರೆ, ಪಶ್ಚಿಮ ಏಷ್ಯಾದಲ್ಲಿನ ಯುದ್ಧ ವಾತಾವರಣದಿಂದಾಗಿ ಬರಲು ಸಾಧ್ಯವಾಗುತ್ತಿಲ್ಲ.
ವಿಶ್ವದ ಅನೇಕ ರಾಷ್ಟ್ರಗಳಿಂದ ದುಬೈ ವಿಮಾನ ನಿಲ್ದಾಣ ಮಾರ್ಗವಾಗಿಯೇ ಭಾರತಕ್ಕೆ ಬರಬೇಕಿದೆ.
ಆದರೆ, ದುಬೈನಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಅವರುಗಳು ಹಿಂತಿರುಗಲು ಇನ್ನೂ ಸಮಯ ಬೇಕಾಗಬಹುದು.
ಚಲುವರಾಯಸ್ವಾಮಿ ಜೊತೆ 10ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಮತ್ತು ಕುಟುಂಬ ವರ್ಗದವರೂ ಇದ್ದಾರೆ.
ನಾರಾ ಭರತ ರೆಡ್ಡಿ, ಬೋಜೇಗೌಡ
ಶಾಸಕರಾದ ನಾರಾ ಭರತ ರೆಡ್ಡಿ, ಬೋಜೇಗೌಡ ಸೇರಿದಂತೆ ಕೆಲವು ವಿಧಾನಸಭಾ ಸದಸ್ಯರು ಮತ್ತು ರಾಜಕಾರಣಿಗಳು ಮತ್ತು ಕುಟುಂಬ ವರ್ಗ ದುಬೈನಲ್ಲಿ ಸಿಲುಕಿಗೊಂಡಿದೆ.
ಅಲ್ಲದೆ, ರಾಜ್ಯ ಚುನಾವಣಾ ಆಯುಕ್ತ ಎಸ್.ಸಂಗ್ರೇಶಿ, ಅವರೂ ದುಬೈನಲ್ಲಿದ್ದಾರೆ, ಇವರನ್ನೂ ಸೇರಿದಂತೆ ಕೆಲವು ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರನ್ನು ತಕ್ಷಣಕ್ಕೆ ಕರೆತರುವ ಪರಿಸ್ಥಿತಿ ಇಲ್ಲ ಎಂದಿದ್ದಾರೆ.
ವಿಮಾನ ಹಾರಾಟ ಸ್ಥಗಿತ
ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿ ನಂತರ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ನಂತರ ಅಲ್ಲಿನ ದೇಶಗಳು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿವೆ.
ಸೌದಿ ಅರೇಬಿಯಾ, ದುಬೈ, ಬಹರೈನ್, ಯುಎಇ, ಇರಾಕ್ ಸೇರಿದಂತೆ ಅರಬ್ ದೇಶಗಳ ವಾಯಪ್ರದೇಶಗಳಲ್ಲಿ ನಾಗರಿಕ ವಿಮಾನಯಾನ ಸಂಚಾರ ಪುನರಾರಂಭ ನಂತರ ಕೇಂದ್ರ ಸರ್ಕಾರ ಪ್ರವಾಸಿಗರನ್ನು ಕರೆಸಿಕೊಳ್ಳಲಿದೆ.
ಪರಿಸ್ಥಿತಿಯಿಂದ ಸ್ಥೈರ್ಯ ಕಳೆದುಕೊಳ್ಳಬೇಡಿ, ನೀವು ಎಲ್ಲಿದ್ದೀರೋ ಅಲ್ಲಿಯೇ ಸುರಕ್ಷಿತ ತಾಣಗಳಲ್ಲಿ ಇರಿ, ರಾಜ್ಯ ಸರ್ಕಾರ ಕೇಂದ್ರದ ಜೊತೆ ನಿರಂತರ ಸಂಪರ್ಕದಲ್ಲಿದ್ದು ನಿಮ್ಮ ರಕ್ಷಣೆಗೆ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ.
ಆತಂಕ ಪರಿಹರಿಸಲು ಕ್ರಮ
ನಿಮಗಿರುವ ಆತಂಕ ಪರಿಹರಿಸಲು ಕ್ರಮ ವಹಿಸಿದ್ದೇವೆ, ಕೆಲವರು ನಮ್ಮನ್ನು ಸಂಪರ್ಕಿಸಿ, ವಿಶೇಷ ವಿಮಾನ ವ್ಯವಸ್ಥೆ ಮಾಡಿ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅದು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ, ನಾಗರಿಕ ವಿಮಾನ ಹಾರಾಟ ಆರಂಭವಾಗುವವರೆಗೆ ಏನೂ ಮಾಡಲಾಗದು, ಕೆಲವರು ವಿಮಾನ ನಿಲ್ದಾಣದಲ್ಲಿ ತಂಗಿರುವ ಮಾಹಿತಿ ಇದೆ.
ಅಂತಹವರ ವೀಸಾಗಳು ರದ್ದಾಗಿವೆ, ಅವರುಗಳು ತಂಗಿರುವ ನಗರದ ಹೋಟೆಲ್‌ಗಳಿಗೆ ತಲುಪಲು ತಾತ್ಕಾಲಿಕ ವೀಸಾ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ರಾಯಭಾರ ಕಚೇರಿಗಳಿಗೆ ಮಾಹಿತಿ ಕಳುಹಿಸಲಾಗಿದೆ.
ಮಾರ್ಗಸೂಚಿ ಪಾಲಿಸಿ, ಶಾಂತವಾಗಿರಿ
ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಪ್ರವಾಸಿಗಳು ರಾಯಭಾರ ಕಚೇರಿಗಳು ನೀಡುವ ಮಾರ್ಗಸೂಚಿಗಳನ್ನು ಪಾಲಿಸಿ, ಶಾಂತವಾಗಿರಿ, ಕದನ ವಿರಾಮ ಏರ್ಪಡುತ್ತಿದ್ದಂತೆ ತಮ್ಮನ್ನು ಕರೆತರಲು ಎಲ್ಲಾ ಕ್ರಮ ಜರುಗಿಸಲಾಗುವುದು.
ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಂಪುಟ ಉಪಸಮಿತಿ ಭಾನುವಾರ ಸಭೆ ಸೇರಿ ಕೆಲವು ತೀರ್ಮಾನಗಳನ್ನು ಕೈಗೊಂಡಿದೆ, ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ ಎಂದಿದ್ದಾರೆ.

