ನವದೆಹಲಿ:ಬಿಸಿಲಿನ ತಾಪದಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯದ ಹವಾಮಾನ ಇಲಾಖೆ (ಐಎಂಡಿ) ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಕಳೆದ ಮೂರು ವಾರಗಳ ಹಿಂದೆಯೇ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.
ಕ್ರಮ ಕೈಗೊಂಡಿಲ್ಲ
ಕೇಂದ್ರ ಪತ್ರ ಬರೆದು ಎಚ್ಚರಿಕೆ ನೀಡಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ ಈ ಸಂಬಂಧ ಸಭೆಯನ್ನೂ ನಡೆಸಿಲ್ಲ.
ಕಳೆದ ಎರಡು ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ, ಅತಿವೃಷ್ಠಿಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಿ ಎಂಬುದಾಗಿ ಕೇಂದ್ರ ಸರ್ಕಾರ ನೀಡಿದ್ದ ಮುನ್ಸೂಚನೆಗೆ ಕರ್ನಾಟಕ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಂಡಿತ್ತು.
ಮಾರ್ಚ್‌ನಿಂದಲೇ ಕರ್ನಾಟಕದಲ್ಲಿ ಒಣಹವೆ ಹೆಚ್ಚಾಗಿ ಪರಿಸರ ಸಮತೋಲನ ತಪ್ಪುತ್ತದೆ ಎಂದು ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದ್ದರೂ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ.
ಗರಿಷ್ಠ ತಾಪಮಾನ
ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗುವುದರ ಜೊತೆಗೆ ಇಡೀ ಕರ್ನಾಟಕದಲ್ಲಿ ಈ ಬಾರಿ ಕಳೆದ ವರ್ಷಗಳಿಗಿಂತ ಎರಡು ಪಟ್ಟು ಬಿಸಿಲಿನ ತಾಪಮಾನ ಹೆಚ್ಚಾಗಲಿದೆ.
ಕಳೆದ 2024ರಲ್ಲಿ ರಾಜ್ಯದ 223 ತಾಲ್ಲೂಕುಗಳು ಬರಪೀಡಿತಕ್ಕೆ ಸಿಲುಕಿತ್ತು, ಪ್ರಸಕ್ತ ವರ್ಷದ ಮಾಹಿತಿ ನೋಡಿದರೆ, ಪ್ರಸ್ತುತ ಹವಾಮಾನವು ಮತ್ತಷ್ಟು ತೇವಾಂಶ ಕೊರತೆ ಸೂಚಿಸುತ್ತದೆ.
ಮಾರ್ಚ್‌ನಿಂದ ಮೇ 26ವರೆಗೆ ದೇಶಾದ್ಯಂತ ವಿಶೇಷವಾಗಿ ದಕ್ಷಿಣ ಒಳನಾಡಿನ ಕೆಲವು ಬಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ನೀರಿನ ತೀವ್ರ ಕೊರತೆ
ಎಲ್-ನೀನೋ ಪರಿಣಾಮದಿಂದಾಗಿ ಮುಂದಿನ ತಿಂಗಳುಗಳಲ್ಲಿ ದೀರ್ಘಕಾಲದ ಒಣ ಹವಾಮಾನ ಮತ್ತು ನೀರಿನ ತೀವ್ರ ಕೊರತೆ ಎದುರಾಗಬಹುದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದೆ.
ಹವಾಮಾನ ಮುನ್ಸೂಚನೆ ಗಮನದಲ್ಲಿ ಇಟ್ಟುಕೊಂಡು ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವಂತೆ ಹೇಳಿದೆ.
ಬೇಸಿಗೆ ಬೆಳೆಗಳಿಗೆ ನೀರಿನ ಕೊರತೆ ಎದುರಾಗಬಹುದು ಜಾಗ್ರತೆ ವಹಿಸಿ, ರಾಜ್ಯದ ಜಲಾಶಯ ಮತ್ತು ಕೆರೆಕಟ್ಟೆಗಳಲ್ಲಿ ಇರುವ ನೀರನ್ನು ಕುಡಿಯುವ ನೀರಿಗೆ ಮೊದಲ ಆದ್ಯತೆ ಕಲ್ಪಿಸಲು ಕ್ರಮ ಕೈಗೊಳ್ಳಿ.
ತಕ್ಷಣ ಕ್ರಮ ಕೈಗೊಳ್ಳಿ
ಬರ ಎದುರಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣದಿಂದಲೇ ಕೈಗೆತ್ತಿಕೊಂಡರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಬೇಸಿಗೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಕೊರತೆ ಭೀತಿ ಹೆಚ್ಚಾಗಿದೆ.
ಟ್ಯಾಂಕರ್ ನೀರು
ಸದ್ಯ 36 ತಾಲ್ಲೂಕುಗಳ 102 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಇದರಲ್ಲಿ 23 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
ಬೇಸಿಗೆ ಪ್ರಾರಂಭದಲ್ಲೇ ಈ ಸ್ಥಿತಿ ಎದುರಾಗಿದ್ದರೂ ಸರ್ಕಾರ ಇನ್ನೂ ಯಾವುದೇ ಮುನ್ನೆಚ್ಚರಿಕಾ ಸಭೆಗಳನ್ನು ನಡೆಸದೆ, ಮುಂಗಡಪತ್ರ ತಯಾರಿಕೆಯಲ್ಲಿ ತಲ್ಲೀನವಾಗಿದೆ.

