ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಮುಂಗಡಪತ್ರ ಮಂಡನೆ ನಂತರ ಅಧಿಕಾರ ತ್ಯಜಿಸಲು ಮಾನಸಿಕವಾಗಿ ಸಿದ್ಧರಾದಂತಿದೆ.
ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಪಟ್ಟ ಬಿಡು ಎಂದರೆ ಬಿಡುವೆ ಎಂಬುದಾಗಿ ಸುದ್ದಿಗಾರರ ಪ್ರಶ್ನೆಗೆ ನೇರವಾಗಿ ಅಲ್ಲದಿದ್ದರೂ, ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಅವಕಾಶ ಸಿಕ್ಕರೆ ಇನ್ನೆರೆಡು ಬಜೆಟ್
ದಾಖಲೆಯ 17 ಬಜೆಟ್ ಮಂಡಿಸಿದ್ದು, ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಅವಧಿ ಇನ್ನೂ ಎರಡು ವರ್ಷವಿದ್ದು, ಮುಂದಿನ ಎರಡು ಮುಂಗಡಪತ್ರಗಳನ್ನೂ ನೀವೇ ಮಂಡಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ಖಂಡಿತಾ ಮಂಡಿಸುವೆ ಎಂದರು.
ಎಲ್ಲವೂ ಹೈಕಮಾಂಡ್ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ, ವರಿಷ್ಠರು ಏನು ತೀರ್ಮಾನ ಮಾಡಿದರೂ ಅದಕ್ಕೆ ತಾನು ಬದ್ಧನಾಗಿರುವೆ.
ಅಧಿಕಾರ ಬಿಡು ಎಂದರೆ ಅದಕ್ಕೂ ಸಿದ್ಧ, ಇನ್ನೆರಡು ಬಜೆಟ್ ಮಂಡಿಸಲು ವರಿಷ್ಠರು ಅವಕಾಶ ನೀಡುತ್ತಾರೋ ಅಥವಾ ಅಧಿಕಾರ ಬಿಡುವಂತೆ ಸೂಚಿಸುತ್ತಾರೋ ನೋಡಬೇಕು.
ವರಿಷ್ಠರ ಸೂಚನೆ ಮೀರಲ್ಲ
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ, ನಾನಷ್ಟೇ ಅಲ್ಲ, ಪಕ್ಷದ ಶಿಸ್ತಿನ ಸಿಪಾಯಿ ಯಾರೇ ಆಗಿದ್ದರೂ, ವರಿಷ್ಠರ ಸೂಚನೆ ಮೀರುವುದಿಲ್ಲ ಎಂಬ ಭಾವನೆ ನಮ್ಮದು ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇತ್ತೀಚೆಗಷ್ಟೇ ಅಧಿಕಾರ ಹಸ್ತಾಂತರ ಕುರಿತು ಮಾಧ್ಯಕ್ಕೆ ಪ್ರತಿಕ್ರಿಯಿಸುತ್ತಾ, ರಾಜ್ಯ ಮುಂಗಡಪತ್ರ ಮಂಡನೆ ನಂತರದ ಬೆಳವಣಿಗೆಗಳನ್ನು ಕಾದುನೋಡಿ ಎಂದಿದ್ದರು.
ಇದೀಗ ಸಿದ್ದರಾಮಯ್ಯ ಮಾನಸಿಕವಾಗಿ ಅಧಿಕಾರ ಬಿಟ್ಟಕೊಡುವ ತೀರ್ಮಾನ ಮಾಡಿದ್ದು, ಶಿವಕುಮಾರ್ ಸಹಾ ದೆಹಲಿ ವರಿಷ್ಠರ ಸೂಚನೆಗಳನ್ನು ಕಾಯುತ್ತಿದ್ದಾರೆ.

