ಬೆಂಗಳೂರು:ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ದಲಿತರ 187 ಕೋಟಿ ರೂ. ಅಕ್ರಮ ವರ್ಗಾವಣೆ ಇದೀಗ ಮೈಸೂರಿನ ಮುಡಾದಲ್ಲಿ 4,000 ಕೋಟಿ ರೂ. ಗುಳುಂ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ’ಕೈ’ಚಳಕದಲ್ಲಿ ’ಸಿದ್ಧ’ ಹಸ್ತ ಎಂಬುದನ್ನು ಸಾಬೀತು ಮಾಡಿದೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಅಧಿಕಾರಿಗಳ ರಕ್ಷಣೆ ಆರೋಪ
ಈ ಸಂಬಂಧ ರಾಜ್ಯ ಬಿಜೆಪಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಲ್ಮಾಲ್ ಮುಖ್ಯಮಂತ್ರಿಯಾಗಿದ್ದು, ಆರೋಪ ಕೇಳಿಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದು, ಇಂತಹ ಕ್ರಮಗಳಿಂದ ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದೆ.
ಹಗರಣ ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ನೇಮಿಸಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದ್ದು ಇದರಲ್ಲಿ ಮುಖ್ಯಮಂತ್ರಿ ಪಾಲು ಎಷ್ಟು ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಬಿಐಗೆ ವಹಿಸಬೇಕು
ಮುಡಾದಲ್ಲಿನ 4,000 ಕೋಟಿ ರೂ. ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಇಲ್ಲವೇ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ, ಸ್ವಂತ ಊರಿನಲ್ಲಿ, ತಮ್ಮ ಆಪ್ತ ಸಚಿವರ ಇಲಾಖೆಯಲ್ಲಿ, ಇಂಥದ್ದೊಂದು ಬೃಹತ್ ಹಗರಣ ತಮ್ಮ ಗಮನಕ್ಕೆ ಬಾರದೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ, ಸಚಿವ ಸಂಪುಟದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ನಿವೇಶನ ನೀಡಲು ಅನುಮತಿ ನೀಡಲಾಗಿದೆ, ಪರ್ಯಾಯ ನಿವೇಶನ ಹಂಚಿಕೆ ವೇಳೆ ಸದರಿ ಬಡಾವಣೆ ಕೈಬಿಟ್ಟು ಲಾಭದ ಬಡಾವಣೆಗಳಲ್ಲಿ ನಿವೇಶನಕ್ಕೆ ಶಿಫಾರಸ್ಸು ಮಾಡಿದವರು ಯಾರು ಎಂದು ಕೇಳಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಪತ್ನಿ ಹೆಸರಿನಲ್ಲೂ ನಿಯಮಬಾಹಿರವಾಗಿ ನಿವೇಶನ ವರ್ಗಾವಣೆ ಮಾಡಿರುವ ಆರೋಪಗಳು ಕೇಳಿಬರುತ್ತಿದ್ದು ಈ ಪ್ರಶ್ನೆಗಳಿಗೆ ಉತ್ತರಿಸುವರೇ ಎಂದಿದ್ದಾರೆ.