ಬೆಂಗಳೂರು:ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಪರಿಶಿಷ್ಟ ಸಮುದಾಯದವರ ಹಣ ಅಕ್ರಮ ವರ್ಗಾವಣೆ ಹಾಗೂ ಮೈಸೂರಿನ ಮುಡಾ ನಿವೇಶನ ಹಂಚಿಕೆ ಅವ್ಯವಹಾರ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆ ಮುತ್ತಿಗೆಗೆ ಮುಂದಾದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಇಂದಿಲ್ಲಿ ಬಂಧಿಸಿ, ವಶಕ್ಕೆ ಪಡೆದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪಕ್ಷದ ಶಾಸಕರು, ಮೇಲ್ಮನೆ ಸದಸ್ಯರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಮುಖ್ಯಮಂತ್ರಿಗಳ ಮನೆ ಮುತ್ತಿಗೆಗೆ ಮುಂದಾದಾಗ ಬಂಧಿಸಲಾಯಿತು.
ಜನಪ್ರತಿನಿಧಿಗಳು ಪೊಲೀಸ್ ವಶಕ್ಕೆ
ಮುಖ್ಯಮಂತ್ರಿಗಳ ಮನೆ ಮುತ್ತಿಗೆಗೆ ಕುಮಾರಕೃಪಾ ವಸತಿ ಗೃಹದಿಂದ ಬಿಜೆಪಿ ನಾಯಕರು, ಶಾಸಕರು ಹೊರಬರುತ್ತಿದ್ದಂತೆ ಮಧ್ಯದಲ್ಲೇ ತಡೆದ ಪೊಲೀಸರು ಹಲವು ಜನಪ್ರತಿನಿಧಿಗಳನ್ನು ಬಲವಂತವಾಗಿ ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಆರ್.ಅಶೋಕ್ ಮಾತನಾಡಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪ್ರತಿಭಟನೆ ನಡೆಸಲು ಅವಕಾಶ ಕೊಡುತ್ತಿಲ್ಲ, ಸರ್ಕಾರದ ಈ ದೌರ್ಜನ್ಯ ಖಂಡನೀಯ ಎಂದರು.
ಮಾತಿನ ಚಕಮಕಿ
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಾನಿರತ ನಾಯಕರು ಹಾಗೂ ಶಾಸಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.