ಮೂಡಾ, ವಾಲ್ಮೀಕಿ ನಿಗಮದ ಹಗರಣದ ಆರೋಪವೇ ಅಸ್ತ್ರ
ಬೆಂಗಳೂರು : ಮೂಡಾ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳನ್ನು ತಾರಕಕ್ಕೆ ಕೊಂಡೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸಿ ಎಂದು ರಾಜ್ಯ ಬಿಜೆಪಿಗೆ ದೆಹಲಿಗೆ ವರಿಷ್ಠರು ಕಟ್ಟಾದೇಶ ಮಾಡಿದ್ದಾರೆ.
ಎರಡೂ ಹಗರಣಗಳಲ್ಲಿ ಮುಖ್ಯಮಂತ್ರಿ ಅವರ ಪಾತ್ರ ಸ್ಪಷ್ಟವಾಗಿ ಕಾಣುತ್ತಿದೆ. ಪ್ರಕರಣದಲ್ಲಿರುವ ಅಂಶಗಳನ್ನು ಜನರ ಮುಂದಿಟ್ಟು ಬೀದಿಗಿಳಿಯಿರಿ ಎಂಬ ಸಂದೇಶ ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ. ವಂಚನೆ ಸದ್ದು ಕೇಳಿಬರುತ್ತಿದ್ದಂತೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಅಲ್ಲದೆ, ಮುಖ್ಯಮಂತ್ರಿ ಅವರ ನಿಜಬಣ್ಣ ಬಯಲು ಮಾಡಲು ವರಿಷ್ಠರು ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ರಾಧಾಮೋಹನ್ ದಾಸ್ ಅವರನ್ನು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ಈಗ ಅವರನ್ನೇ, ಈ ಹಗರಣಗಳ ಆಧಾರದ ಮೇಲೆ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲು ಮಾಡಿ ಮುಖ್ಯಮಂತ್ರಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ.
ರಾಧಾಮೋಹ್ ದಾಸ್ ಅಗರ್ವಾಲ್ ನಗರಕ್ಕೆ ಬರುತ್ತಿದ್ದಂತೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಈ ಎರಡೂ ವಿಷಯಗಳನ್ನೇ ಪ್ರಮುಖವಾಗಿ ತೆಗೆದುಕೊಂಡು ಮುಂದಿನ ಹೋರಾಟ ಸ್ವರೂಪದ ಚಿತ್ರಣ ನೀಡಿದ್ದಾರೆ.
ಅಷ್ಟೇ ಅಲ್ಲ, ಈ ವಿಷಯದಲ್ಲಿ ಯಾವುದೇ ಹೊಂದಾಣಿಕೆ ರಾಜಕೀಯ ಮಾಡಕೂಡದು, ಪಕ್ಷ ಸಂಘಟನೆ ಹಾಗೂ ಈ ಸರ್ಕಾರದಲ್ಲಿನ ಭ್ರಷ್ಟಾಚಾರ ಬಯಲಿಗೆಳೆಯಲು ಇದು ನಿಮಗೊಂದು ಅಸ್ತ್ರವಾಗಿದೆ.
ಇದೇ ಕಾಂಗ್ರೆಸ್ಸಿಗರು ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲ-ಸಲ್ಲದ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು.
ನಂತರ ಅವರು ಮಾಡಿದ ಆರೋಪವನ್ನು ತಮ್ಮ ಆಡಳಿತದಲ್ಲಿ ಸಾಬೀತು ಮಾಡಲಾಗಲಿಲ್ಲ. ಈಗ ನಿಗಮಗಳ ಹಣ ಮತ್ತು ಜನರಿಗೆ ಹಂಚಬೇಕಾದ ನಿವೇಶನಗಳನ್ನು ಲೂಟಿ ಹೊಡೆಯುತ್ತಿದ್ದಾರೆ.
ಪರಿಶಿಷ್ಟರಿಗೆ ಸೇರಿದ ನಿಗಮದಲ್ಲಿ ಕೋಟ್ಯಂತರ ರೂ.ಗಳನ್ನು ಸಚಿವರು ಹಾಗೂ ಆ ಪಕ್ಷದ ಮುಖಂಡರು ಲೂಟಿ ಮಾಡಿರುವುದು ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿ ಅವರಿಗೆ ತಿಳಿಯದೆ.
ಇದರಲ್ಲೂ ಮುಖ್ಯಮಂತ್ರಿ ಅವರ ಪಾತ್ರ ನೇರವಾಗಿ ಕಾಣುತ್ತದೆ, ಮುಡಾ ಪ್ರಕರಣವನ್ನು ಬಯಲಿಗೆಳೆದವರೂ ನಮ್ಮ ಜನಪ್ರತಿನಿಧಿಗಳೇ. ಈ ಎರಡೂ ಹಗರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿ ಎಂದು ಅಗರ್ವಾಲ್ ಸಲಹೆ ನೀಡಿದ್ದಾರೆ.