ವಿರೋಧಗಳ ನಡುವೆಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಠ
ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸ್ಥಳೀಯರ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಜಿಲ್ಲೆಯ ಪಕ್ಷದ ಜನಪ್ರತಿನಿಧಿಗಳ ಜೊತೆಗೂಡಿ ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಶಿವಕುಮಾರ್, ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.
ಆಸ್ತಿ ಮೌಲ್ಯ ಹೆಚ್ಚುತ್ತದೆ
ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವುದರಿಂದ ಆಸ್ತಿ ಮೌಲ್ಯ ಹೆಚ್ಚುತ್ತದೆ, ಮೈಸೂರುವರೆಗೂ ಅಭಿವೃದ್ಧಿ ಸಾಧಿಸಲು, ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿ ಆಗುತ್ತದೆ ಎಂದು ನಿಯೋಗ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ.
ಬೆಂಗಳೂರಿನ ಒಂದು ದಿಕ್ಕಿನಲ್ಲಿ ಆಂಧ್ರ ಪ್ರದೇಶ, ಮತ್ತೊಂದು ದಿಕ್ಕಿನಲ್ಲಿ ತಮಿಳುನಾಡು ರಾಜ್ಯಗಳ ಗಡಿ ಬರುತ್ತದೆ, ಹೀಗಾಗಿ ಬೆಂಗಳೂರಿನ ವಿಸ್ತರಣೆಗೆ ನಮಗೆ ಉಳಿದಿರುವುದು ತುಮಕೂರು ಮತ್ತು ರಾಮನಗರ ಭಾಗವಷ್ಟೆ.
ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳ ಭವಿಷ್ಯ ಹಾಗೂ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು.
ಮೂಲತಃ ಬೆಂಗಳೂರು ಜಿಲ್ಲೆ
ಬೆಂಗಳೂರು ನಗರ ಸೇರಿದಂತೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ನಾವೆಲ್ಲರೂ ಮೂಲತಃ ಬೆಂಗಳೂರು ಜಿಲ್ಲೆಯವರು, ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಎಂದು ಹಿಂದೆ ವಿಭಾಗ ಮಾಡಲಾಯಿತು.
ರಾಮನಗರವನ್ನು ಕೇಂದ್ರಾಡಳಿತವಾಗಿಟ್ಟುಕೊಂಡೇ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ಅಗತ್ಯ, ಬೆಂಗಳೂರು ಜಾಗತಿಕ ಮನ್ನಣೆ ಹೊಂದಿದ್ದು, ಈ ಜಿಲ್ಲೆಯ ಹೆಸರು ಉಳಿಸಿಕೊಳ್ಳಲು ನನ್ನ ಮುಖಂಡತ್ವದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ನಾವು ಯಾವುದೇ ಹೊಸ ಜಿಲ್ಲೆ ಮಾಡುತ್ತಿಲ್ಲ, ಇರುವ ಜಿಲ್ಲೆ ಹಾಗೇ ಇರಲಿದೆ, ರಾಮನಗರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ, ಕನಕಪುರ ತಾಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ಮುಂದಾಗಿದ್ದೇವೆ ಎಂದರು.
ಸಿಸಿಟಿವಿ ಕ್ಯಾಮೆರಾ
ಬೆಂಗಳೂರು ನಗರದಲ್ಲಿ ಮನೆ ಬಳಿ ಬರುವ ಕಸ ಸಂಗ್ರಹ ವಾಹನಗಳಿಗೆ ಕಸ ಹಾಕದೆ ರಸ್ತೆ ಬದಿ ಎಸೆಯುತ್ತಿದ್ದಾರೆ, ಇಂತಹವರ ಪತ್ತೆಗೆ ಎಲ್‌ಇಡಿ ವಿದ್ಯುತ್ ಕಂಬಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಲಾಗಿದೆ.
ಎಲ್ಲಿಬೇಕೆಂದರಲ್ಲಿ ಕಸ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯುವವರನ್ನು ಗುರುತಿಸಿ ಪ್ರಕರಣ ದಾಖಲಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ.
ಡೆಂಗಿ ನಿಯಂತ್ರಣಕ್ಕೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತಿವೆ, ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸುತ್ತಾರೆ.
ಮಂತ್ರಿ, ಶಾಸಕರ ಪಾತ್ರವಿಲ್ಲ
ಮಹರ್ಷಿ ವಾಲ್ಮೀಕಿ ನಿಗಮ ಭ್ರಷ್ಟಾಚಾರದ ಆರೋಪಿಗಳ ಸಂಭಾಷಣೆ ಆಡಿಯೋ ತಾವು ಕೇಳಿಲ್ಲ, ಮುಕ್ತವಾಗಿ ತನಿಖೆ ನಡೆಯಬೇಕೆಂಬ ಕಾರಣಕ್ಕೆ ಸಚಿವರೇ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದಾರೆ, ನಾನು ಇದರಲ್ಲಿ ಮೂಗು ತೂರಿಸಲು ಹೋಗುವುದಿಲ್ಲ, ಭ್ರಷ್ಟಾಚಾರದಲ್ಲಿ ನಮ್ಮ ಮಂತ್ರಿ, ಶಾಸಕರ ಪಾತ್ರವಿಲ್ಲ, ಬೇರೆಯವರು ಭಾಗಿಯಾಗಿದ್ದಾರೆ ಎಂದರು.
ಸಿಬ್ಬಂದಿ ಕೊರತೆ ಕಾರಣಕ್ಕೆ ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿಲ್ಲ, ಈ ಬಗ್ಗೆ ಗಮನಹರಿಸುತ್ತೇವೆ ಎಂದರು.