ಹೈದರಾಬಾದ್:ಅದಿರು ಪೂರೈಕೆ ಸ್ಥಿರತೆಯನ್ನು ಸಮರ್ಥವಾಗಿ ಕಾಪಾಡಿಕೊಂಡು, ಉಕ್ಕು ತಯಾರಿಕಾ ಘಟಕಗಳಿಗೆ ಕಬ್ಬಿಣದ ಅದಿರು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿಗಮದ ಪ್ರಗತಿ ಪರಿಶೀಲಿಸಿದ ಅವರು, ಬೃಹತ್ ಉಕ್ಕು ತಯಾರಿಕಾ ಘಟಕಗಳಿಗೆ ಅದಿರು ಪೂರೈಕೆ ಜೊತೆಗೆ ಮಧ್ಯಮ, ಸಣ್ಣ, ಅತಿಸಣ್ಣ ಉಕ್ಕು ತಯಾರಿಕಾ ಘಟಕಗಳಿಗೂ ಅದಿರು ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಹೆಚ್ಚೆಚ್ಚು ಉದ್ಯೋಗ ಸೃಷ್ಟಿ
ಅದಿರು ಪೂರೈಕೆಯಲ್ಲಿ ಸಮತೋಲನ, ಸ್ಥಿರತೆ ಕಾಪಾಡಿಕೊಂಡರೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬಹುದು, ಆ ಮೂಲಕ ಉಕ್ಕು ವಲಯದಿಂದ ದೇಶೀಯ ಜಿಡಿಪಿಗೆ ದೊಡ್ಡ ಕೊಡುಗೆ ನೀಡಬಹುದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಎಂದರು.
2024ಕ್ಕೆ ವಾರ್ಷಿಕ 100 ದಶಲಕ್ಷ ಟನ್ ಕಬ್ಬಿಣದ ಅದಿರು ಹೊರತೆಗೆಯುವ ನಿಗಮದ ಗುರಿ ಬಗ್ಗೆ ಮಾಹಿತಿ ಪಡೆದ ಅವರು, ಗಣಿಗಾರಿಕೆಯನ್ನು ಇನ್ನೂ ಪರಿಣಾಮಕಾರಿ ಮಾಡುವ ಮೂಲಕ ಅದಿರು ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಿ, ವಾರ್ಷಿಕ 300 ದಶಲಕ್ಷ ಟನ್ ಉಕ್ಕು ತಯಾರಿಸುವ ಗುರಿಯನ್ನು ಪ್ರಧಾನಿ ನೀಡಿದ್ದಾರೆ, ಅದನ್ನು ದುಪ್ಪಟ್ಟು ಮಾಡುವ ಮಾಡುವಲ್ಲಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ ಕೆಲಸ ಮಾಡಬೇಕು.
ಹೆಚ್ಚು ಪ್ರಮಾಣದಲ್ಲಿ ಗಣಿಗಾರಿಕೆ ಮಾಡಬೇಕು, ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಅರಣ್ಯ ಬೆಳೆಸಬೇಕು, ಗಣಿಗಾರಿಕೆ, ಪೂರೈಕೆ ಹಾಗೂ ಉಕ್ಕು ತಯಾರಿಕೆ ಸರಪಳಿಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು.
ಕಬ್ಬಿಣ, ಚಿನ್ನ, ವಜ್ರದ ಗಣಿಗಾರಿಕೆ ನಡೆಸುವ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮಕ್ಕೆ ಕೇಂದ್ರ ಸರ್ಕಾರದಿಂದ ಎಲ್ಲಾ ಸಹಕಾರ ಇರಲಿದೆ ಎಂದರು.