ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದುಗೊಳಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಕರ್ನಾಟಕದ ಮುಖ್ಯಮಂತ್ರಿಯಾಗಲು ಇನ್ನೊಂದು ಮೆಟ್ಟಿಲು ಬಾಕಿ ಇರುವಾಗಲೇ ನ್ಯಾಯಾಲಯದ ಈ ತೀರ್ಪು ಅವರನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸಿದೆ.
ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಇಲ್ಲ
ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಎಸ್.ಸಿ.ಶರ್ಮಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ತಮ್ಮ ವಿರುದ್ಧ ಸಿಬಿಐ ಆರಂಭಿಸಿರುವ ತನಿಖೆಯನ್ನು ಕೈಬಿಡುವಂತೆ ಶಿವಕುಮಾರ್ ಈ ಮೊದಲು ರಾಜ್ಯ ಹೈಕೋರ್ಟ್‌ನ ಮೊರೆ ಹೋಗಿದ್ದರು.
ಶಿವಕುಮಾರ್ ವಾದ ಆಲಿಸಿದ್ದ ನ್ಯಾಯಾಲಯ ಇದನ್ನು ರದ್ದುಪಡಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು.
ಹಿಂದಿನ ಸರ್ಕಾರದ ಅನುಮತಿ
ಹೈಕೋರ್ಟ್ ಮೊರೆ ಹೋಗುವುದಕ್ಕೂ ಮುನ್ನ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹಿಂದಿನ ಸರ್ಕಾರದ ಅನುಮತಿಯನ್ನು ಸಿದ್ದರಾಮಯ್ಯ ಸಂಪುಟ ಹಿಂದಕ್ಕೆ ಪಡೆದುಕೊಂಡಿತ್ತು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ರಹದಾರಿ ಮಾಡಿಕೊಟ್ಟಿತ್ತು, ಇದನ್ನು ಸಿದ್ದರಾಮಯ್ಯ ಸರ್ಕಾರ ನಂತರದ ದಿನಗಳಲ್ಲಿ ಹಿಂದಕ್ಕೆ ಪಡೆದಿತ್ತು.
ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿ ಹಿಂದಕ್ಕೆ ಪಡೆದಿರುವುದರಿಂದ ತಮ್ಮ ವಿರುದ್ಧದ ಸಿಬಿಐ ತನಿಖೆಯನ್ನು ರದ್ದುಪಡಿಸುವಂತೆ ಶಿವಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಹೆಚ್ಚು ಸಂಪತ್ತು ಗಳಿಕೆ
2013ರಿಂದ 2017ರ ಅವಧಿಯಲ್ಲಿ ಶಿವಕುಮಾರ್ ತಮ್ಮ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಗಳಿಸಿದ್ದಾರೆಂದು ಸಿಬಿಐ ಆರೋಪಿಸಿದ್ದು, ಆ ಕುರಿತಂತೆ ಎಫ್‌ಐಆರ್ ದಾಖಲಿಸಿತ್ತು. ಆ ಪ್ರಕರಣವನ್ನು ಕೈಬಿಡುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಶಿವಕುಮಾರ್ ಮನವಿ ಸಲ್ಲಿಸಿದ್ದರು.
ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಅನುಮತಿ ಪಡೆಯದೆ ತನಿಖೆ ಆರಂಭಿಸಲಾಗಿದೆ. 2018 ರ ತಿದ್ದುಪಡಿಯ ದಿನಾಂಕದ ಮೊದಲು ಸೆಕ್ಷನ್ 17ಎ ಸೇರಿಸಲಾದ ಅಪರಾಧಗಳಿಗೆ ಸೆಕ್ಷನ್ 17ಎ ಅನ್ವಯಿಸುತ್ತದೆಯೇ ಎಂಬ ವಿಷಯವನ್ನು ಅವರು, ಚಂದ್ರಬಾಬು ನಾಯ್ಡು ಪ್ರಕರಣವನ್ನು ಪೀಠದ ಮುಂದಿಟ್ಟರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ವಿಭಜಿತ ತೀರ್ಪಿನ ಆಧಾರದ ಮೇಲೆ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುವುದಿಲ್ಲ ಎಂದರು.
ಮನವಿಗೆ ಪೀಠ ನಿರಾಸಕ್ತಿ
ಮುಂದುವರೆದು ಮುಕುಲ್ ರೋಹಟಗಿ ಅವರು, ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಬೇಕೆಂಬ ಮನವಿಗೆ ಪೀಠ ನಿರಾಸಕ್ತಿ ವ್ಯಕ್ತಪಡಿಸಿತು.
ಈ ಹಿಂದಿನ ಸಿದ್ದರಾಮಯ್ಯ ಅವರ ರಾಜ್ಯ ಸರ್ಕಾರದಲ್ಲಿ ಶಿವಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ 74 ಕೋಟಿ ರೂ.ಗಳಷ್ಟು ದಾಖಲೆರಹಿತ ಆದಾಯ ಗಳಿಸಿದ್ದಾರೆಂಬುದು ಪ್ರಮುಖ ಆರೋಪ ಇದಾಗಿದೆ. ಅದರಂತೆ, 74.93 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದಾರೆಂದು ಸಿಬಿಐ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ 2016ರಲ್ಲಿ ರಾಜ್ಯ ಸರ್ಕಾರಕ್ಕೆ ಸಿಬಿಐ ಅರ್ಜಿ ಸಲ್ಲಿಸಿತ್ತು.
ಪ್ರಕರಣವನ್ನು ಸಿಬಿಐಗೆ ವಹಿಸಿದ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದನ್ನು ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಹಂತದಲ್ಲಿ ವಾದ ಮಂಡಿಸಿದ ಸಿಬಿಐ, ಒಮ್ಮೆ ತನಿಖೆಗೊಳಪಡಿಸಲಾದ ಪ್ರಕರಣವನ್ನು ಹಿಂಪಡೆಯಲಾಗದು ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಿತು. ಇದೇ ವೇಳೆ ಸುಪ್ರೀಂಕೋರ್ಟ್‌ಗೂ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು.