ಬೆಂಗಳೂರು:ಸರ್ಕಾರಿ ನೌಕರರಿಗೆ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.
ನಿನ್ನೆ ರಾತ್ರಿ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸಭಾಧ್ಯಕ್ಷರ ಅನುಮತಿ ಪಡೆದು, ಸ್ವಯಂ ಹೇಳಿಕೆ ನೀಡಿದ ಮುಖ್ಯಮಂತ್ರಿ ಅವರು, ಹೆಚ್ಚಳ ವೇತನ ಆಗಸ್ಟ್‌ನಿಂದ ದೊರೆಯಲಿದೆ ಎಂದರು.
ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ನೇತೃತ್ವದ ವೇತನ ಆಯೋಗ ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ ಜೊತೆಗೆ ಶೇಕಡ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡಿತ್ತು.
ಆಗಸ್ಟ್ 2024ರಿಂದ ಅನುಷ್ಟಾನ
ಆಯೋಗದ ಶಿಫಾರಸಿನಂತೆ ನೌಕರರ ವೇತನ, ಭತ್ಯೆ, ಪಿಂಚಣಿಯನ್ನು 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ, ಆಗಸ್ಟ್ 2024ರಿಂದ ಅನುಷ್ಟಾನಗೊಳಿಸಲು ಸಂಪುಟ ತೀರ್ಮಾನಿಸಿದೆ.
ಈ ನಿರ್ಧಾರದಿಂದ ಸರ್ಕಾರಿ ನೌಕರರಲ್ಲದೆ, ಪಿಂಚಣಿ ಪಡೆಯುವರು, ಸರ್ಕಾರಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಸಿಬ್ಬಂದಿಗೂ ಇದರ ಲಾಭ ದೊರೆಯಲಿದೆ.
ನೌಕಕರ ಕನಿಷ್ಠ ಮೂಲವೇತನ 17,000 ರೂ.ನಿಂದ 27,000ಕ್ಕೆ, ಗರಿಷ್ಠ ವೇತನವು 1,50,600 ರೂ.ನಿಂದ 2,41,200 ರೂ.ಗಳಿಗೆ ಪರಿಷ್ಕರಣೆಯಾಗಿದೆ.
ಪಿಂಚಣಿ ಮೊತ್ತ ಪರಿಷ್ಕರಣೆ
ಪಿಂಚಣಿಯು ಕನಿಷ್ಠ 8,500 ರೂ.ನಿಂದ 13,500 ರೂ.ಗೆ, ಗರಿಷ್ಠ 75,300 ರೂ.ನಿಂದ 1,20,600 ರೂ.ಗೆ ಪರಿಷ್ಕರಣೆ ಮಾಡಲಾಗಿದೆ.
ಈ ಪರಿಷ್ಕರಣೆಯು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.
ನೌಕರರ ವೇತನ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 20,208 ಕೋಟಿ ರೂ. ಹೊರೆ ಬೀಳಲಿದೆ ಎಂದು ವಿವರಿಸಿದರು.