ವಿಧಾನಸಭೆಯಲ್ಲಿ ಗುಡುಗಿದ ತಂದೆ ಎಚ್.ಡಿ.ರೇವಣ್ಣ
ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಎಂದು ಅವರ ತಂದೆ ಎಚ್.ಡಿ.ರೇವಣ್ಣ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡುವಾಗ, ಪ್ರಜ್ವಲ್ ರೇವಣ್ಣ ಪ್ರಕರಣವನ್ನೂ ಪ್ರಸ್ತಾಪಿಸಿದರು.
ಈ ಅವಕಾಶವನ್ನು ಬಳಕೆ ಮಾಡಿಕೊಂಡ ರೇವಣ್ಣ, ಸಭಾಧ್ಯಕ್ಷರ ಅನುಮತಿ ಪಡೆದು, ನನಗೆ ಕಾಂಗ್ರೆಸ್ ಶಾಸಕರಂತೆ ವಾದ ಮಾಡುವ ಶಕ್ತಿ ಇಲ್ಲ, ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಗೆ ಹಾಕಿ, ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ.
25 ವರ್ಷಗಳಿಂದ ಶಾಸಕ
ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ, 25 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ, ನನ್ನ ವಿರುದ್ಧ ಹೆಣ್ಣು ಮಗಳೊಬ್ಬಳನ್ನು ಪೊಲೀಸ್ ಮಹಾನಿರ್ದೇಶಕರು ಕಚೇರಿಗೆ ಕರೆಸಿಕೊಂಡು ನನ್ನ ವಿರುದ್ಧ ದೂರು ಬರೆಸಿಕೊಂಡಿದ್ದಾರೆ.
ಇಂತಹ ವ್ಯಕ್ತಿ ಪೊಲೀಸ್ ಮಹಾನಿರ್ದೇಶಕನಾಗಲು ಅನರ್ಹ, ಮೂರೂ ಬಿಟ್ಟ ಈ ನೀತಿಗೆಟ್ಟ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ನಾನು ಪ್ರತ್ಯೇಕ ನೋಟಿಸ್ ಕೊಡುತ್ತೇನೆ, ಸವಿಸ್ತಾರ ಚರ್ಚೆಯಾಗಲಿ, ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ಗುಡುಗಿದರು.
ಎಸ್‌ಐಟಿ ತನಿಖಾ ಸಂಸ್ಥೆ ತಾರತಮ್ಯ
ಇದಕ್ಕೂ ಮುನ್ನ ಅಶೋಕ್ ಮಾತನಾಡುತ್ತಾ, ಎಸ್‌ಐಟಿ ತನಿಖಾ ಸಂಸ್ಥೆಗಳು ಯಾವ ರೀತಿ ತಾರತಮ್ಯ ಮಾಡುತ್ತಿವೆ ಎಂದು ವಿವರಿಸುವ ವೇಗದಲ್ಲಿ, ಪ್ರಜ್ವಲ್ ರೇವಣ್ಣ ಆರೋಪಿ ಎಂದು ಹೇಳಿದ ಮಾತು ಚರ್ಚೆಗೆ ಗ್ರಾಸವಾಯಿತು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಎಫ್‌ಐಆರ್ ದಾಖಲಾಗಿ 40 ದಿನಗಳಾದರೂ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ವಿಚಾರಣೆಗೆ ಕರೆಯುವುದಿಲ್ಲ, ಆದರೆ, ರೇವಣ್ಣನ ಮಗ ಮಾಡಿದ ತಪ್ಪಿಗೆ ರೇವಣ್ಣ ಅವರನ್ನು ಕರೆಸಿ ಜೈಲಿಗೆ ಹಾಕಲಾಯಿತು, ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗೆ ತಲಾ 20 ಮಂದಿ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿತ್ತು.
ರೇವಣ್ಣ ಅವರ ಪತ್ನಿ ಭವಾನಿ ಅವರ ಬಂಧನಕ್ಕೂ ಪ್ರಯತ್ನಿಸಲಾಯಿತು, ಅವರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡರು, ನಮ್ಮ ಪಕ್ಷದ ಮಾಜಿ ಶಾಸಕ ಪ್ರೀತಂಗೌಡ ಅವರನ್ನು ಬಂಧಿಸುವ ಯತ್ನಗಳಾದವು, ಎಸ್‌ಐಟಿ ಅಧಿಕಾರಿಗಳ ಈ ತಾರತಮ್ಯ ಏಕೆ ಎಂದರು.
ಕೂಡಲೇ ಮಧ್ಯಪ್ರವೇಶಿಸಿ ಮಾತನಾಡಿದ ಎಚ್.ಡಿ.ರೇವಣ್ಣ, ವಿರೋಧಪಕ್ಷದ ನಾಯಕರು ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ, ಸ್ಪಷ್ಟನೆ ನೀಡಲು ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ನ್ಯಾಯಾಲಯ ತೀರ್ಮಾನ ಮಾಡುತ್ತದೆ
ಜೆಡಿಎಸ್ ಶಾಸಕ ಕೃಷ್ಣಪ್ಪ ಅವರು, ರೇವಣ್ಣ ಅವರ ಪುತ್ರ ತಪ್ಪು ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ, ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆರ್.ಅಶೋಕ್ ತಮ್ಮ ಹೇಳಿಕೆ ಸರಿಪಡಿಸಿಕೊಳ್ಳುವುದಾಗಿ ಸದನಕ್ಕೆ ತಿಳಿಸಿದರು.
ಈ ಚರ್ಚೆ ನಡುವೆಯೇ ಪದೇ ಪದೇ ವಿಷಯ ಪ್ರಸ್ತಾಪವಾದಾಗ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ಎರಡು ಎಸ್‌ಐಟಿ ತಂಡಗಳ ನಡುವೆ ಪದೇ ಪದೇ ಹೋಲಿಕೆ ಮಾಡಿ ಮಾತನಾಡುತ್ತಿರುವುದು ಏಕೆ, ನೂರಾರು ಮಹಿಳೆಯರ ಮಾನಹರಣವಾಗಿರುವ ಪ್ರಕರಣ ವಾಲ್ಮೀಕಿ ಹಗರಣಕ್ಕಿಂತಲೂ ಕಡಿಮೆ ಎಂಬ ಧೋರಣೆಯೇ, ಮಹಿಳೆಯರ ಮಾನಕ್ಕೆ ಬೆಲೆ ಇಲ್ಲವೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಾನ ಹೋದರೆ ಬರುತ್ತದೆಯೇ
ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಮಧ್ಯಪ್ರವೇಶಿಸಿ, ಹಣ ಹೋದರೆ ಬರುತ್ತದೆ, ಮಾನ ಹೋದರೆ ಬರುತ್ತದೆಯೇ ಎಂದರು.
ಈ ಹಂತದಲ್ಲಿ ಸಿಟ್ಟಾದ ರೇವಣ್ಣ, ನಿಮ್ಮ ಬಂಡವಾಳ ಗೊತ್ತಿದೆ, ಕುಳಿತುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣಪ್ಪ, ನೀವೆಲ್ಲಾ ಶ್ರೀರಾಮಚಂದ್ರರು ಎಂದು ಕಾಂಗ್ರೆಸ್ಸಿಗರನ್ನು ಮೂದಲಿಸಿದರು.
ಈ ಸಂದರ್ಭದಲ್ಲಿ ಮಾತು ಮುಂದುವರೆಸಿದ ರೇವಣ್ಣ, ತಪ್ಪು ಮಾಡಿದ್ದರೆ ನನ್ನ ಮಗನನ್ನು ಗಲ್ಲಿಗೆ ಹಾಕಿ, ರಾಜಕೀಯ ದುರುದ್ದೇಶಕ್ಕಾಗಿ, ತಪ್ಪು ಮಾಡದವರ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿ ನಿಮ್ಮ ರಾಜಕೀಯ ಸೇಡುಗಳನ್ನು ತೀರಿಸಿಕೊಳ್ಳುವುದನ್ನು ಬಿಡಿ, ಮುಂದೆ ಇದೇ ವೇದಿಕೆಯಲ್ಲಿ ಎಲ್ಲವನ್ನೂ ಚರ್ಚಿಸೋಣ ಎಂದರು.