ಕ್ಷೇತ್ರಗಳಿಗೆ ಅಭಿವೃದ್ಧಿ ಹಣ ನೀಡುತ್ತಿಲ್ಲವೆಂಬ ಕೋಪ
ಬೆಂಗಳೂರು:ಅಭಿವೃದ್ಧಿಗೆ ಹಣವಿಲ್ಲ, ಕ್ಷೇತ್ರದಲ್ಲಿ ನಮಗೆ ಬೇಕಾದ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುವ ಅಧಿಕಾರಕ್ಕೂ ಕಡಿವಾಣ ಹಾಕಿರುವ ಬಗ್ಗೆ ಯುವ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ನಗರದ ಖಾಸಗಿ ಪಂಚತಾರಾ ಹೋಟೆಲ್ ಒಂದರಲ್ಲಿ ಸೇರಿದ್ದ 40ಕ್ಕೂ ಹೆಚ್ಚು ಶಾಸಕರು, ಸರ್ಕಾರ ಹಾಗೂ ಸಚಿವರ ನಿರ್ಧಾರಗಳ ಬಗ್ಗೆ ತೀವ್ರ ಕಿಡಿಕಾರಿದ್ದಾರೆ.
ಒಂದೆಡೆ ನಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ, ಮತ್ತೊಂದೆಡೆ ನಮಗೆ ಬೇಕಾದ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುವ ಅಧಿಕಾರವನ್ನೂ ಕಿತ್ತುಕೊಂಡರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ನಾಯಕತ್ವದ ವಿರುದ್ಧ ಬಂಡಾಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸಚಿವರುಗಳು ಲಾಬಿ ನಡೆಸುತ್ತಿರುವ ಬೆನ್ನಲ್ಲೇ ಯುವಪಡೆ ಸಭೆ ಸೇರಿ ಇಂತಹ ತೀರ್ಮಾನ ಕೈಗೊಂಡಿರುವುದು ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡಾಯ ಎದ್ದಂತಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ರವಿ ಗಾಣಿಗ ಅವರ ಮುಂದಾಳತ್ವದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಯುವ ಶಾಸಕರೇ ಹೆಚ್ಚಾಗಿ ಭಾಗವಹಿಸಿದ್ದರು.
ಕಳೆದ ವರ್ಷ ಪ್ರಾರಂಭದಲ್ಲೂ ಇಂತಹ ಸಭೆ ಮಾಡಿದ್ದರಾದರೂ, ಅದು ಕೇವಲ ಒಂದು ಸ್ನೇಹಕೂಟಕ್ಕೆ ಸೀಮಿತವಾಗಿತ್ತು, ಆದರೆ ನಿನ್ನೆ ನಡೆದ ಸಭೆಯಲ್ಲಿ ಸರ್ಕಾರದ ನಿರ್ಧಾರಗಳ ಬಗ್ಗೆ ಮೆಲ್ಲಗೆ ಅಪಸ್ವರಗಳು ಕೇಳಿಬಂದಿದೆ.
25 ಕೋಟಿ ರೂ. ಬಿಡುಗಡೆ ವಾಗ್ದಾನ
ಮುಖ್ಯಮಂತ್ರಿಗಳ (ಶಾಸಕರ) ನಿಧಿಯಿಂದ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕಳೆದ ನಾಲ್ಕು ತಿಂಗಳ ಹಿಂದೆಯೇ ಸಿದ್ದರಾಮಯ್ಯ ತಿಳಿಸಿದ್ದರು.
ಇದುವರೆಗೂ ಆ ಹಣ ಬಿಡುಗಡೆಯಾಗಿಲ್ಲ, ಅಲ್ಲದೆ, ಬೇರೆ ಇಲಾಖೆಗಳ ಲೆಕ್ಕದ ಬಾಬ್ತಿನಡಿಯಲ್ಲೂ ಅಭಿವೃದ್ಧಿ ಕಾರ್ಯಕ್ಕೆ ಹಣ ಸಿಗುತ್ತಿಲ್ಲ.
ಬಡವರಿಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದರೂ ಲೋಕಸಭಾ ಚುನಾವಣೆಯಲ್ಲಿ ಅದರ ಪೂರ್ಣ ಲಾಭ ನಮಗೆ ದಕ್ಕಿಲ್ಲ.
ರಸ್ತೆ ಗುಂಡಿಗಳನ್ನೂ ಮುಚ್ಚಲಾಗದ ಸ್ಥಿತಿ
ಕ್ಷೇತ್ರಗಳಲ್ಲಿ ರಸ್ತೆ ಗುಂಡಿಗಳನ್ನೂ ಮುಚ್ಚಲಾಗದೆ ನಮ್ಮ ಸ್ಥಿತಿ ಚಿಂತಾಜನಕವಾಗಿದೆ, ಇದರ ನಡುವೆ ಕೆಳಹಂತದ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುವ ಅವಕಾಶವೂ ತಪ್ಪುತ್ತಿದೆ.
ಮತ ನೀಡಿದವರು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸುವ ಶಕ್ತಿ ಇಲ್ಲದಂತಾಗಿರುವುದಲ್ಲದೆ, ತಮ್ಮವರೊಬ್ಬರನ್ನು ಕ್ಷೇತ್ರದಲ್ಲಿ ಅಧಿಕಾರಿಯಾಗಿ ನಿಯೋಜಿಸುವಂತೆ ಮಾಡಿದ ಮನವಿಗೂ ಸ್ಪಂದನೆ ಇಲ್ಲವಾಗಿದೆ.
ವೈದ್ಯರು ಮತ್ತು ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ನಿಯೋಜಿಸಲಾಗುತ್ತಿದೆ, ಇದೀಗ ಗ್ರಾಮೀಣಾಭಿವೃದ್ಧಿಯಡಿ ಬರುವ ಪಿಡಿಒಗಳು ಹಾಗೂ ಕಂದಾಯ ಇಲಾಖೆಯಡಿ ಬರುವ ನೋಂದಣಿ ಅಧಿಕಾರಿಗಳ ನಿಯೋಜನೆಗೂ ಇದೇ ಪದ್ಧತಿ ತರಲಾಗಿದೆ.
ವರ್ಗಾವಣೆಗೂ ಹೊಸ ಮಾರ್ಗಸೂಚಿ
ಪೊಲೀಸ್ ವರ್ಗಾವಣೆಗೂ ಹೊಸ ಮಾರ್ಗಸೂಚಿ ಬಂದಿದೆ, ಇದರಿಂದ ನಾವು ನಮ್ಮ ಕ್ಷೇತ್ರದಲ್ಲಿ ಬೇಕಾದ ’ಸಿ’ ಮತ್ತು ’ಡಿ’ ದರ್ಜೆ ನೌಕರರನ್ನೂ ನಿಯೋಜಿಸಿಕೊಳ್ಳುವ ಅಧಿಕಾರ ಇಲ್ಲದಂದಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಕ್ರೀಡಾಕೂಟ ನೆಪದಲ್ಲಿ ಸೇರಿದ್ದ ಸಭೆ ಕೊನೆ ಕೊನೆಯಲ್ಲಿ, ಮುಖ್ಯಮಂತ್ರಿ ಹಾಗೂ ಸಚಿವರುಗಳ ನಿರ್ಧಾರಗಳ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತವಾಗಿದೆ.
ರವಿ ಗಾಣಿಗ ಅವರ ಮುಂದಾಳತ್ವದಲ್ಲಿ ಸಭೆ ನಡೆಯಿತಾದರೂ ಹಳೇ ಮೈಸೂರು ಭಾಗದ ಹಿರಿಯ ಸಚಿವರೊಬ್ಬರು ತೆರೆಮರೆಯಲ್ಲಿ ಈ ಔತಣಕೂಟದ ಮುಂದಾಳತ್ವ ವಹಿಸಿದ್ದರು.