ಬೆಂಗಳೂರು:ಪರಿಶಿಷ್ಟ ವರ್ಗ ಮತ್ತು ಪಂಗಡಕ್ಕಾಗಿ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿಯ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡು ಈ ಜನಾಂಗಗಳಿಗೆ ದ್ರೋಹ ಮಾಡಲಾಗಿದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿಂದು ಟೀಕಿಸಿದ್ದಾರೆ.
ನಿಲುವಳಿ ಸೂಚನೆ ಮೇಲಿನ ಪೂರ್ವಭಾವಿ ಚರ್ಚೆಯಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳನ್ನು ಅವೈಜ್ಞಾನಿಕವಾಗಿ ಜಾರಿಗೆ ತರಲಾಯಿತು, ಯೋಜನೆಗಳಿಗೆ ಬಜೆಟ್ ಅನುದಾನ ಒದಗಿಸುವ ಬಗ್ಗೆ ಚರ್ಚೆ ಮಾಡಲಿಲ್ಲ, ಕಳೆದ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೀಸಲಿಟ್ಟಿದ್ದ ಎಸ್ಸಿಪಿ ಮತ್ತು ಟಿಎಸ್ಪಿಯ 25 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂದರು.
ಬೇರೆ ಉದ್ದೇಶಗಳಿಗೆ ಬಳಕೆ
ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಸಮುದಾಯದ ಕಲ್ಯಾಣಕ್ಕಾಗಿ ರಸ್ತೆ, ಚರಂಡಿ, ಪ್ರದೇಶ, ಬಡಾವಣೆಗಳ ಅಭಿವೃದ್ಧಿಗೆ ವಿನಿಯೋಗಿಸಬೇಕಿತ್ತು, ನಿಯಮ ಗಾಳಿಗೆ ತೂರಿ ಹಣ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ.
ಲಿಂಗಾಯತರ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ, ಬ್ರಾಹ್ಮಣರ ಅಭಿವೃದ್ಧಿ ನಿಗಮದ ಹಣವನ್ನೂ ಎಂದು ಕೆಣಕಿದರು.
ಎಸ್ಸಿ/ಎಸ್ಟಿ ಜನಾಂಗಕ್ಕೆ 2 ಸಾವಿರ ರೂ. ಕೊಡುವುದರಿಂದ ಶುದ್ಧ ಕುಡಿಯುವ ನೀರು ದೊರೆಯುವುದಿಲ್ಲ, ಜನಾಂಗಕ್ಕೆ ಮೀಸಲಿಟ್ಟ ಹಣವನ್ನ ಬೇರೆ ಕಾರಣಕ್ಕೆ ಖರ್ಚು ಮಾಡಬಾರದು, ಚರ್ಚೆಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಕೋರಿದರು.
ಸಭಾಧ್ಯಕ್ಷ ಸಭಾಧ್ಯಕ್ಷ ಯು.ಟಿ.ಖಾದರ್, ನಿಲುವಳಿ ಸೂಚನೆ ಬದಲಿಗೆ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.