ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಮಗದಲ್ಲಿ ನಡೆದಿರುವ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಮೂಲಕ ಸಿಲುಕಿಸಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಮುಖ್ಯಮಂತ್ರಿ ಅವರ ಆಪ್ತ ಸಚಿವರ ಬಳಗ ಇಂದಿಲ್ಲಿ ಕಿಡಿಕಾರಿದೆ.
ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಇ.ಡಿ.ಗೆ ತಪ್ಪಿತಸ್ಥರ ಹುಡುಕುವ ಉದ್ದೇಶ ಇಲ್ಲ, ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡುವುದೇ ಇವರ ಉದ್ದೇಶ ಎಂದರು.
ಅಪ್ರೂವರ್ ಹೇಳಿಕೆ ಪಡೆಯುವ ಯತ್ನ
ಪ್ರಕರಣದ ಆರೋಪಿಗಳಿಂದ ಅಪ್ರೂವರ್ ಆಗಿ ಹೇಳಿಕೆ ಪಡೆಯುವ ಯತ್ನ ನಡೆದಿದೆ, ತಪ್ಪೊಪ್ಪಿಗೆ ನೀಡಿ ಇಲ್ಲದಿದ್ದರೆ, ನಿಮಗೆ ಇ.ಡಿ. ಪವರ್ ಗೊತ್ತಿಲ್ಲ, ನಂತರ ನೀವೇ ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದು ವಿಚಾರಣೆ ವೇಳೆ ಹೆದರಿಸುವ ಮೂಲಕ ಅಧಿಕಾರಿಗಳು ತನಿಖೆಯನ್ನೇ ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ, ಆದರೆ, ಇಂತಹ ಗೊಡ್ಡು ಹೆದರಿಕೆ, ಬೆದರಿಕೆಗಳಿಗೆ ನಾವು ಬಗ್ಗುವ ಮಾತೇ ಇಲ್ಲ ಎಂದರು.
ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಛೀಮಾರಿ ಹಾಕಿದ ಅವರು, ವಾಲ್ಮೀಕಿ ನಿಗಮದ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ, ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಭಾಗಿಯಾಗಿದ್ದಾರೆ ಎಂಬ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾಮಮಾರ್ಗದಲ್ಲಿ ಅಧಿಕಾರ ಯತ್ನ
ಜನ ಮನ್ನಣೆ ಹಾಗೂ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ದುರ್ಬಲವಾಗಿರುವ ಬಿಜೆಪಿ ನಾಯಕರು, ಜಾರಿ ನಿರ್ದೇಶನಾಲಯ (ಇ.ಡಿ.) ಬಳಸಿಕೊಂಡು ವಾಮಮಾರ್ಗದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ.
ಆಪರೇಷನ್ ಕಮಲ ಸೇರಿದಂತೆ ಬಿಜೆಪಿಯ ಇಂತಹ ಜನ ವಿರೋಧಿ ಕಸರತ್ತುಗಳು ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ವಿಚಾರವೇನಲ್ಲ, ಇ.ಡಿ., ಸಿಬಿಐ ಹಾಗೂ ಐಟಿ ಸಂಸ್ಥೆಗಳನ್ನು ಸರ್ಜಿಕಲ್ ಸ್ಟ್ರೈಕ್ ತರ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಬಳಕೆ ಮಾಡುತ್ತಲೇ ಇದೆ, ಇದೀಗ ಮುಂದುವರೆದ ಭಾಗವಾಗಿ ಕರ್ನಾಟಕದಲ್ಲೂ ಹತಾಶ ಮನೋಭಾವದಿಂದ 2009ರಂತೆ ಆಪರೇಷನ್ ಕಮಲ ಸಾಧ್ಯವಿಲ್ಲ ಎಂದು ತಿಳಿದು, ಇದೀಗ ಇ.ಡಿ. ಮೂಲಕ ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮುಂದೆ ನಿಂತು ಮಾಡುತ್ತಿದೆ, ಆದರೆ, ಇವರ ಗೊಡ್ಡು ಬೆದರಿಕೆಗಳಿಗೆ, ಸಂವಿಧಾನ ವಿರೋಧಿ ನಡೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಕಳೆದ 10 ವರ್ಷದಲ್ಲಿ ಇ.ಡಿ. ರಾಜಕೀಯ ಅಸ್ತ್ರವಾಗಿದೆ, ಬಿಜೆಪಿಗೆ ಎಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಇ.ಡಿ., ಐಟಿ ಬಳಸಿಕೊಂಡು ಆಡಳಿತ ಪಕ್ಷಗಳ ಮೇಲೆ ದಾಳಿ ಮಾಡುವುದು ವಾಡಿಕೆಯಾಗಿದೆ.
ಬಿಜೆಪಿಯ ಇಂತಹ ನೀಚ ನಡೆಗಳಿಗೆ ಜಾರ್ಖಂಡ್, ಪಶ್ಚಿಮಬಂಗಾಳ, ದೆಹಲಿ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮಹಾರಾಷ್ಟ್ರ ಸೇರಿದಂತೆ ಸಾಕಷ್ಟು ಉದಾಹರಣೆಗಳಿದ್ದು, ಪಟ್ಟಿ ಇನ್ನೂ ದೊಡ್ಡದಿದೆ ಎಂದರು.
ಇ.ಡಿ. ಪ್ರಕರಣಗಳ ಹೆಚ್ಚಳ
ಕೆಲವು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡಿವೆ, 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದಲ್ಲಿ ಇ.ಡಿ. ದಾಖಲಿಸುವ ಪ್ರಕರಣಗಳ ಸಂಖ್ಯೆ ಶೇ.400ರಷ್ಟು ಹೆಚ್ಚಳವಾಗಿದೆ, ಅದರಲ್ಲಿ ಶೇ.೯೫ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ವಿರುದ್ಧವಾಗಿದೆ.
ಶೇ.5ರಷ್ಟು ಮಾತ್ರ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಮೇಲೆ ಗುರಿಯಾಗಿದೆ, ಬಿಜೆಪಿ ವಾಷಿಂಗ್ ಮೆಷಿಂಗ್ ಪಕ್ಷ ಎಂಬುದನ್ನು ಸಾಬೀತುಪಡಿಸುತ್ತಿವೆ, ವಿಪಕ್ಷದಲ್ಲಿದ್ದರೆ ಕೇಸು, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆ ಚೀಟಿ ಎಂಬುದನ್ನು ಒತ್ತಿ ಹೇಳುತ್ತಿವೆ ಎಂದು ಅವರು ಅಂಕಿ-ಅಂಶಗಳನ್ನು ಮುಂದಿಟ್ಟರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಈ ಕಾಲದಲ್ಲಿ ಸತ್ಯ ಮತ್ತು ನಿಖರ ಅಂಕಿ-ಅಂಶಗಳು ಲೆಕ್ಕಕ್ಕಿಲ್ಲದಂತಾಗಿವೆ, ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.53ರಷ್ಟು ಪ್ರಕರಣಗಳು ಮಾತ್ರ ವಿರೋಧ ಪಕ್ಷಗಳ ನಾಯಕರ ಮೇಲೆ ದಾಖಲಾಗಿತ್ತು, ಶೇ.47ರಷ್ಟು ಪ್ರಕರಣಗಳು ಸ್ವತಃ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಾಯಕರ ಮೇಲೆ ದಾಖಲಾಗಿದ್ದವು, ಆದರೆ, ಇಂದಿನ ಸ್ಥಿತಿ ಏನು ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಹೆಣದ ಮೇಲೂ ಹಣ
ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಸಾಕಷ್ಟು ಹಗರಣಗಳು ನಡೆದಿವೆ, ಕೊರೊನಾ ಸಂದರ್ಭದಲ್ಲಿ ಹೆಣದ ಮೇಲೂ ಹಣ ಮಾಡಿದ ಆರೋಪ ಬಿಜೆಪಿ ಮೇಲಿದೆ, ಆದರೆ, ಜಾರಿ ನಿರ್ದೇಶನಾಲಯ ಈ ಬಗ್ಗೆ ಏಕೆ ತನಿಖೆ ನಡೆಸುವುದಿಲ್ಲ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ 46 ಕೋಟಿ ರೂ. ಲೂಟಿಯಾಗಿದೆ, ಬಿಜೆಪಿಯ ಮಾಜಿ ಎಂಎಲ್‌ಸಿ ಹಾಗೂ ಮಾಜಿ ಎಂಪಿ ಅಭ್ಯರ್ಥಿಯೊಬ್ಬರ ಬ್ಯಾಂಕ್ ಖಾತೆಗೆ 3 ಕೋಟಿ ರೂ. ಹೋಗಿದೆ, ಈ ಪ್ರಕರಣವನ್ನು ಏಕೆ ಇ.ಡಿ. ತನಿಖೆ ಮಾಡುತ್ತಿಲ್ಲ, ಇದು ಹಗರಣದ ಲಾಭಾಂಶ ಅಲ್ವ, ಆ ಲೂಟಿಯ ಹಣ ಯಾವ ಎಲೆಕ್ಷನ್‌ಗೆ ಹೋಗಿದೆ ಅಂತ ಇ.ಡಿ. ಏಕೆ ತನಿಖೆ ನಡೆಸುತ್ತಿಲ್ಲ.
ಭೋವಿ ನಿಗಮ, ತಾಂಡ ಅಭಿವೃದ್ಧಿ ನಿಗಮದಲ್ಲೂ ಕೋಟಿ ಕೋಟಿ ರೂ. ಲೂಟಿಯಾಗಿದೆ ಅಲ್ಲಿ ಏಕೆ ತನಿಖೆ ಇಲ್ಲ ಎಂದರು.
ವಿಜಯೇಂದ್ರ ಆಗಾಗ್ಗೆ ದುಬೈಗೆ
ವಾಲ್ಮೀಕಿ ನಿಗಮ ಹಗರಣದ ಸ್ವರೂಪದಂತೆಯೇ ಈ ಹಿಂದೆ ಡಾ.ಅಂಬೇಡ್ಕರ್ ನಿಗಮದಲ್ಲೂ ಹಗರಣವಾಗಿದೆ, ಈ ಬಗ್ಗೆ ಏಕೆ ತನಿಖೆ ಇಲ್ಲ, ಕೋವಿಡ್ ಸಂದರ್ಭದಲ್ಲಿ ಹೆಣಗಳು ಬೀಳುತ್ತಿದ್ದರೆ, ಬಿಜೆಪಿ ನಾಯಕರು ಹೆಣಗಳ ಮೇಲೆ ಹಣ ಮಾಡುತ್ತಾ ಇದ್ದರಲ್ಲ, ಆ ಬಗ್ಗೆ ತನಿಖೆ ಏಕಿಲ್ಲ, ಬಿಜೆಪಿ ಶಾಸಕರೊಬ್ಬರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಆಗಾಗ್ಗೆ ದುಬೈಗೆ ಹೋಗಿಬರುತ್ತಿರುವ ಬಗ್ಗೆ ಧ್ವನಿ ಎತ್ತುತ್ತಿದ್ದಾರಲ್ಲ, ಆ ಬಗ್ಗೆ ತನಿಖೆ ಏಕಿಲ್ಲ ಎಂದು ಗುಡುಗಿದರು.
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ, ತನಿಖೆಯಲ್ಲಿ ಅಧಿಕಾರದ ದುರುಪಯೋಗ ನಡೆಯುತ್ತಿದೆ, ಪ್ರಕರಣದ ಸಾಕ್ಷಿಗಳನ್ನು ಕರೆಸಿ ಸತ್ಯಕ್ಕೆ ದೂರವಾದ ಸುಳ್ಳಿನ ಹೇಳಿಕೆಗಳನ್ನು ನೀಡುವಂತೆ ಮಾಡಲಾಗುತ್ತಿದೆ, ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಅಗತ್ಯ ಬಂದರೆ ನಾವೂ ಕಾನೂನಿನ ಹೋರಾಟದ ಜೊತೆಗೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದರು.