ಬೆಂಗಳೂರು:ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಆಡಳಿತದ ಸಂದರ್ಭದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಗರಣ ಕುರಿತು ಮುಂದುವರೆದು ಉತ್ತರ ನೀಡಿದ ಮುಖ್ಯಮಂತ್ರಿ ಅವರು, ಬಿಜೆಪಿ ಆಡಳಿತದಲ್ಲಿ ನಡೆದಿರುವ ಹಗರಣಗಳ ಪಟ್ಟಿಯನ್ನೇ ಸದನದ ಮುಂದಿಟ್ಟು ಇದರಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅಷ್ಟೇ ಅಲ್ಲದೆ, ಹಲವು ಸಚಿವರುಗಳು ಭಾಗಿಯಾಗಿದ್ದಾರೆ ಎಂದರು.
ಅಸಂಖ್ಯಾತ ಹಗರಣಗಳು
ಇವರಿಬ್ಬರ ಆಡಳಿತದಲ್ಲಿ ಅಸಂಖ್ಯಾತ ಹಗರಣಗಳು ನಡೆದಿವೆ, ಅದರಲ್ಲಿ ಕೆಲವನ್ನು ಮಾತ್ರ ನಾನು ಇಲ್ಲಿ ಹೇಳಬಯಸುತ್ತೇನೆ ಮತ್ತು ತನಿಖೆಗೂ ಒಪ್ಪಿಸುತ್ತೇನೆ ಎಂದು ಪಟ್ಟಿಯನ್ನೇ ಸದನದ ಮುಂದಿಟ್ಟರು.
ಯಡಿಯೂರಪ್ಪ, ಬೊಮ್ಮಾಯಿ ಆಡಳಿತವಿದ್ದಾಗ ಎಪಿಎಂಸಿಯಲ್ಲಿ 47.16 ಕೋಟಿ ರೂ., ಬೋವಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂ.ಗೂ ಹೆಚ್ಚು, ದೇವರಾಜ ಅರಸು ಟ್ರಕ್ ಟರ್ಮಿನಲ್ 50 ಕೋಟಿ ರೂ.ಗೂ ಹೆಚ್ಚು, ಗಂಗಾಕಲ್ಯಾಣ ಯೋಜನೆಯಡಿ 430 ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯಲ್ಲಿ 247 ಕೋಟಿ ರೂ., ಕಿಯೊನಿಕ್ಸ್ ಹಗರಣದಲ್ಲಿ 500 ಕೋಟಿ ರೂ., ಕೋವಿಡ್ ಹಗರಣ.
ಪಿಎಸ್‌ಐ ಮತ್ತು ಇತರ ನೇಮಕಾತಿ, ಪರುಶುರಾಮ್ ಥೀಮ್ ಪಾರ್ಕ್, ಬಿಟ್ ಕಾಯಿನ್ ಹಗರಣಗಳ ಬಗ್ಗೆಯೂ ತನಿಖೆ ನಡೆಸಲಾಗುವುದು.
ಆದಾಯ ಮೀರಿದ ಆಸ್ತಿ
ಯಡಿಯೂರಪ್ಪ ಆಪ್ತ ಉಮೇಶ್ ಹಾಗೂ ಇತರರ ಮನೆಯಲ್ಲಿ 750 ಕೋಟಿ ರೂ.ಗೂ ಹೆಚ್ಚು ಹಣ ದೊರೆತಿದೆ, ಅಲ್ಲದೆ, ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ನೂರಾರು ಕೋಟಿ ರೂ.
ಕೆಕೆಆರ್‌ಡಿಬಿ, ಕಂದಾಯ, ಕೃಷಿ, ಅಂಗನವಾಡಿ, ಗಣಿ, ಬಿಡಿಎ ಮತ್ತು ಕೆಐಎಡಿಬಿ ಡಿ-ನೋಟಿಫಿಕೇಷನ್ ಹಗರಣಗಳು ಇವರ ಆಡಳಿತದಲ್ಲೇ ನಡೆದಿರುವುದು.
ಇವರ ಆಡಳಿತದ ಸಚಿವರಾಗಿದ್ದ ವಿ.ಸುನೀಲ್‌ಕುಮಾರ್, ಎಚ್.ನಾಗೇಶ್, ಆರ್. ಅಶೋಕ್, ಪಿ.ಮುನಿರತ್ನ, ಬಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಕೆ.ಸುಧಾಕರ್, ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಸಿ.ಪಿ.ಯೋಗೇಶ್ವರ್, ಕೋಟ ಶ್ರೀನಿವಾಸ ಪೂಜಾರಿ ಈ ಹಗರಣದಲ್ಲಿ ಪ್ರಮುಖ ಪಾಲುದಾರರು ಮತ್ತು ಇವರ ಮೂಗಿನಡಿಯಲ್ಲಿಯೇ ಹಗರಣಗಳು ನಡೆದಿವೆ ಎಂದು ಬಿಡಿಸಿಟ್ಟರು.
ತೀವ್ರ ಪ್ರತಿಭಟನೆ
ಧರಣಿ ನಿರತ ಬಿಜೆಪಿ ಅವರಿಂದ ತೀವ್ರ ಪ್ರತಿಭಟನೆ ನಡುವೆಯೂ ಸಿದ್ಧಪಡಿಸಿ ಹೇಳಿಕೆಯನ್ನು ಓದಿದ್ದಲ್ಲದೆ, ಇವೆಲ್ಲವೂ ದಾಖಲೆಗೆ ಸೇರಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ, ತಿಂದವರು, ತಿಂದುಕೊಂಡು ಹೋಗಲಿ ಎಂದು ಬಿಡುವುದಕ್ಕೆ ನಮ್ಮದು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರವಲ್ಲ ಅಥವಾ ಮೋದಿ ಸರ್ಕಾರವಲ್ಲ, ಯಾರೇ ತಪ್ಪೆಸಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ.
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಸುತ್ತಿದ್ದು, ಒಂದಷ್ಟು ಹಣವನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಬಂಧಿಸಿದ್ದಾರೆ, ನಂತರ ನಾವು ಅವರನ್ನು ಅಮಾನತು ಮಾಡಿದ್ದೇವೆ.
ಆದರೆ, ಬಿಜೆಪಿ ಆಡಳಿತದಲ್ಲಿ ಇಂತಹ ಕಳ್ಳರನ್ನು ಮಟ್ಟ ಹಾಕಿದ್ದರೆ ಅಥವಾ ಮೋದಿ ಸರ್ಕಾರ ಖದೀಮ ಬ್ಯಾಂಕ್ ಮ್ಯಾನೇಜರ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದರೆ ಇಂದು ದೇಶದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ.
ಅನೇಕ ಬ್ಯಾಂಕ್ ಫ್ರಾಡ್‌ಗಳು
ರಾಜ್ಯದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಅನೇಕ ಬ್ಯಾಂಕ್‌ಗಳಲ್ಲಿ ಫ್ರಾಡ್‌ಗಳು ನಡೆದಿವೆ, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಕಠಿಣ ನಿಲುವುಗಳನ್ನೇ ತೆಗೆದುಕೊಂಡಿಲ್ಲ ಎಂದು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಮಗದಲ್ಲಿ ಹಿಂದೆಯೂ ಹಗರಣಗಳಾಗಿವೆ, ಅವುಗಳನ್ನೂ ನಾವು ಹೊರ ತರುತ್ತೇವೆ.
ಬಿಜೆಪಿ ಆಡಳಿತದಲ್ಲಿ ಇದ್ದಾಗ ಎಷ್ಟು ಹಣ ವಸೂಲಿ ಮಾಡಿದ್ದೀರಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಅವರು, ಖದೀಮರನ್ನು ಜೈಲಿಗೆ ಹಾಕದೆ, ಎಲ್ಲರನ್ನೂ ರಕ್ಷಿಸಿದ್ದರಿಂದಲೇ ಈ ಪ್ರಕರಣಗಳು ಮರುಕಳಿಸುತ್ತಿವೆ.
ದೊಡ್ಡ ಪ್ರಮಾಣದ ವ್ಯವಹಾರಗಳು
ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರಗಳು ನಡೆಯುವಾಗ ಆದಾಯ ತೆರಿಗೆ ಇಲಾಖೆಯವರು, ಬ್ಯಾಂಕಿನವರನ್ನು ಏಕೆ ಪ್ರಶ್ನೆ ಮಾಡಲಿಲ್ಲ, ಆ ಸಿಬ್ಬಂದಿಗಳು ನಿಗಮದ ಅಧಿಕಾರಿಗಳ ಜೊತೆ ಕೈಜೋಡಿಸಿ ಈ ಅವ್ಯವಹಾರ ನಡೆಸಿದ್ದಾರೆ.
ಯಾವುದೇ ಸಂದರ್ಭದಲ್ಲೂ ಕಳ್ಳರು ಏಕಾಏಕಿ ಹುಟ್ಟುವುದಿಲ್ಲ, ಅವರು ನುರಿತರು ಹಾಗೂ ಪರಿಣಿತರಾಗಬೇಕಾದರೆ ಅವರಿಗೆ ಹಿಂದೆ ಬಹಳ ಇಮ್ಯೂನಿಟಿ ದೊರೆತಿರುತ್ತದೆ, ಹಾಗಾಗಿ ಕಳ್ಳರನ್ನು ಬೆಳೆಸಿದವರು ನೀವೇ.
ಈ ವಿಷಯದಲ್ಲಿ ಆರೋಪಿಗಳಾಗಿರುವ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ.ಪದ್ಮನಾಭ ಹಿಂದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಲೂಟಿ ಮಾಡಿದ್ದರು, ಆಗ ನೀವು ಅವರನ್ನು ರಕ್ಷಣೆ ಮಾಡಿದ್ದಿರಿ, ಇಂದು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿದ್ದಾರೆ ಎಂದರು.