ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜನಪ್ರಿಯತೆ ಸಹಿಸಿಕೊಳ್ಳಲಾರದ ಹಂತಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ತಲುಪಿದೆ.
ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲವೆಡೆ ಭೂ ಕುಸಿತಗಳು ಸಂಭವಿಸಿದ್ದು, ಆ ಪ್ರದೇಶಗಳಿಗೆ ಕುಮಾರಸ್ವಾಮಿ ಅವರು ಭೇಟಿ ನೀಡುತ್ತಿದ್ದಾರೆಂಬ ವರದಿ ತಲುಪುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ, ಕೇಂದ್ರ ಸಚಿವರು ಪರಿಶೀಲನೆ ನಡೆಸುವ ಜಾಗಕ್ಕೆ ಐದು ಕಿಲೋ ಮೀಟರ್ ದೂರದಲ್ಲೇ ಮಾಧ್ಯಮಗಳನ್ನು ತಡೆದಿರುವ ಪ್ರಸಂಗ ವರದಿಯಾಗಿದೆ.
ಉತ್ತರ ಕರ್ನಾಟಕದ ಶಿರೂರುಗುಡ್ಡ ಕುಸಿತ ಪ್ರದೇಶಕ್ಕೆ ಕುಮಾರಸ್ವಾಮಿ ಭೇಟಿ ನೀಡುವುದು ಮಾಧ್ಯಮಗಳಲ್ಲಿ ಸುದ್ದಿಯಾಗದಂತೆ ತಡೆಯಲು ಯತ್ನಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂಜುಬುರುಕುತನ ತೋರಿಸುತ್ತದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ
ರಕ್ಷಣಾ ಕಾರ್ಯಾಚರಣೆ ಸ್ಥಳದಿಂದ 5 ಕಿ.ಮೀ ದೂರದಲ್ಲೇ ಬ್ಯಾರಿಕೇಡ್‌ಗಳನ್ನು ಹಾಕಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ, ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಈ ನಡೆ ಸಂವಿಧಾನ ವಿರೋಧಿ ಅಲ್ಲವೇ ಎಂದು ಮುಖ್ಯಮಂತ್ರಿ ಅವರನ್ನು ಪಕ್ಷ ಪ್ರಶ್ನಿಸಿದೆ.
ದುರಂತ ನಡೆದು ಕೆಲವು ದಿನಗಳಾದರೂ ಶಿರೂರಿಗೆ ಮುಖ್ಯಮಂತ್ರಿಯಾಗಲೀ, ಸರ್ಕಾರದ ಯಾವುದೇ ಸಚಿವರಾಗಲಿ ಭೇಟಿ ನೀಡಿಲ್ಲ, ಸಂತ್ರಸ್ತರ ಸಂಕಷ್ಟ ಆಲಿಸಿಲ್ಲ, ಆದರೆ, ಕುಮಾರಸ್ವಾಮಿ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದೆ.
ಕುಮಾರಸ್ವಾಮಿ ಪ್ರಚಾರಕ್ಕಾಗಿ ಶಿರೂರಿಗೆ ಭೇಟಿ ನೀಡುತ್ತಿಲ್ಲ, ಜಿಲ್ಲಾಡಳಿತ ಬಳಸಿ ಮಾಧ್ಯಮದವರನ್ನು ತಡೆದ ಮಾತ್ರಕ್ಕೆ, ಕೇಂದ್ರ ಸಚಿವರ ಭೇಟಿ ನಿಲ್ಲಿಸಲು, ಸಂತ್ರಸ್ತರ ಕಷ್ಟ ಆಲಿಸುವುದನ್ನು ತಡೆಯಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಇಳಿಯುವರೆಂದು ಊಹಿಸಿರಲಿಲ್ಲ ಎಂದು ಜೆಡಿಎಸ್ ಹೇಳಿದೆ.