ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಇ.ಡಿ. ವಶದಲ್ಲಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಜೈಲು ಪಾಲಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರನ್ನು ಪೋಲಿಸ್ ಭದ್ರತೆಯಲ್ಲಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಂದು ಇ.ಡಿ. ಹಾಜರುಪಡಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ನಾಗೇಂದ್ರ ಅವರನ್ನು ಆಗಸ್ಟ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.
ನಾಗೇಂದ್ರ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಚಿಕಿತ್ಸೆ ಕೊಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂಬ ವಕೀಲರ ಮನವಿ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಹೃದಯ ಸಂಬಂಧಿ ಕಾಯಿಲೆ
ಹಣ ಅಕ್ರಮ ವರ್ಗಾವಣೆಯಲ್ಲಿ ನಾಗೇಂದ್ರ ಪ್ರಮುಖ ಪಾತ್ರವಿದ್ದು, ವಿಚಾರಣೆ ನಡೆಸಬೇಕಿದೆ ಇ.ಡಿ. ಕಸ್ಟಡಿಗೆ ನೀಡಿ ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಚಿಕಿತ್ಸೆಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನಾಗೇಂದ್ರ ಪರ ವಕೀಲರು ಮನವಿ ಮಾಡಿದ್ದರಿಂದ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಯಿತು.
ಇದೇ ವೇಳೆ ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್, ಜಾಮೀನು ಅರ್ಜಿ ಸಲ್ಲಿಸುವುದಾಗಿ ಮಾಡಿದ ಮನವಿಗೆ ನ್ಯಾಯಾಧೀಶರು ಸಮ್ಮತಿಸಿದರು.