ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿಂದು ಮಂಡಿಸಿದ 2024-25ನೇ ಸಾಲಿನ ಮುಂಗಡಪತ್ರದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ. ಕೊಡುಗೆ ಘೋಷಿಸಿದ್ದಾರೆ.
ದೇಶದ 5 ರಾಜ್ಯಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ, ಮುಂದಿನ ವರ್ಷಗಳಲ್ಲಿ ದೇಶಾದ್ಯಂತ 10,000 ಜೈವಿಕ ಸಂಶೋಧನಾ ಕೇಂದ್ರಗಳ ಸ್ಥಾಪನೆ, ನೈಸರ್ಗಿಕ ಕೃಷಿಗೆ ಪ್ರೇರಣೆ, ತರಕಾರಿ ಬೆಳೆಗಳೇ ಜೀವನಾಧಾರವಾಗಿರುವ ರೈತರಿಗೆ, ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ ಯೋಜನೆ, 32 ಬೆಳೆಗಳ 109 ತಳಿಗಳ ಬಿಡುಗಡೆ, ಮಾರುಕಟ್ಟೆ ಕೇಂದ್ರಗಳ ಸಮೀಪ ದೊಡ್ಡ ಕ್ಲಸ್ಟರ್ಗಳ ನಿರ್ಮಾಣ.
ಬೇಳೆಕಾಳು ಮತ್ತು ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಖಚಿತಪಡಿಸಿಕೊಳ್ಳಲು 6 ಕೋಟಿ ರೈತರ ಭೂಮಿಯನ್ನು ರೈತ ಮತ್ತು ಭೂನೋಂದಣಿ ಮಾಡಲಾಗುವುದು.
ಮೀನು ಸಾಕಣೆದಾರರ ಅಭಿವೃದ್ಧಿಗೆ ಸಿಗಡಿ ಸಂತಾನೋತ್ಪತ್ತಿ ಕೇಂದ್ರಗಳಿಗೆ ಆರ್ಥಿಕ ನೆರವು, ನಬಾರ್ಡ್ ಮೂಲಕ ಸಿಗಡಿಗಳ ರಫ್ತಿಗೆ ಅನುಕೂಲ ಕಲ್ಪಿಸಲಾಗುವುದು.
4.1 ಕೋಟಿ ಯುವಜನರಿಗೆ ಉದ್ಯೋಗಕ್ಕೆ ಆದ್ಯತೆ
ದೇಶದ 4.1 ಕೋಟಿ ಯುವಜನರಿಗೆ ಉದ್ಯೋಗಕ್ಕೆ ಆದ್ಯತೆ ನೀಡಲು ತೀರ್ಮಾನಿಸಲಾಗಿದ್ದು, 2 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ರೈತರು, ಮಹಿಳೆಯರು ಹಾಗೂ ಯುವಜನರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ಪ್ರಮುಖ ಯೋಜನೆಗಳ ಮೂಲಕ ಕೋಟ್ಯಂತರ ಯುವಜನರಿಗೆ ಉದ್ಯೋಗ ನೀಡುವ ಜತೆಗೆ ಒಂದು ಕೋಟಿ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆದ್ಯತೆ ನೀಡಲಾಗುತ್ತದೆ.
ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಇಪಿಎಫ್‌ಒಗೆ ನೋಂದಣಿ ಆಗುತ್ತಲೇ ಕೇಂದ್ರ ಸರ್ಕಾರ ಒಂದು ತಿಂಗಳ ಸಂಬಳ ರೂಪದಲ್ಲಿ 15 ಸಾವಿರ ರೂ. ಪ್ರೋತ್ಸಾಹಧನವನ್ನು ಮೂರು ಕಂತುಗಳಲ್ಲಿ ನೀಡಲಿದೆ, ಇದರಿಂದ 2.1 ಕೋಟಿ ಯುವಜನರಿಗೆ ಅನುಕೂಲವಾಗಲಿದೆ.
ಮುದ್ರಾ ಸಾಲ ಮಿತಿ ದ್ವಿಗುಣ
ಮುದ್ರಾ ಯೋಜನೆಯಡಿ ಸಾಲಗಳ ಗರಿಷ್ಠ ಮಿತಿಯನ್ನು ದ್ವಿಗುಣಗೊಳಿಸಲಾಗಿದ್ದು, 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಆರ್ಥಿಕ ಒತ್ತಡದ ಅವಧಿಯಲ್ಲಿ ಬ್ಯಾಂಕ್ ಸಾಲ ಮುಂದುವರಿಕೆಗೆ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 5.4 ಲಕ್ಷ ಕೋಟಿ ರೂ. ಮುದ್ರಾ ಸಾಲ ವಿತರಿಸಲಾಗಿದೆ.
ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನ 24 ಹೊಸ ಶಾಖೆ ತೆರೆಯುವುದು, ವಾರ್ಷಿಕ 100,000 ವಿದ್ಯಾರ್ಥಿಗಳಿಗೆ ಇ-ವೋಚರ್ಗಳನ್ನು ನೀಡಲಿದೆ, ಸಾಲದ ಮೊತ್ತದ ಮೇಲೆ 3% ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವರು ಘೋಷಿಸಿದರು.
ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರ ರೂ.ಗೆ ಏರಿಕೆ
ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಹೊಸ ತೆರಿಗೆದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ, ಪಿಂಚಣಿದಾರರಿಗೆ 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಏರಿಕೆ ಮಾಡಲಾಗಿದ್ದು, ಇದರಿಂದ 4 ಕೋಟಿ ಜನರಿಗೆ ಅನುಕೂಲವಾಗಲಿದೆ.
ಹೊಸ ತೆರಿಗೆ ಪದ್ಧತಿಯಡಿ 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದ್ದು, ಎನ್‌ಜಿಒ ಸೇರಿದಂತೆ ಯಾವುದೇ ರೀತಿಯ ದಾನ ಮಾಡುವವರಿಗೆ ಎರಡು ಸ್ಲ್ಯಾಬ್ ಬದಲು, ಒಂದು ಸ್ಲ್ಯಾಬ್ ಮಾಡಲಾಗಿದೆ, ಟಿಡಿಎಸ್ ನಿಯಮಗಳ ಸರಳೀಕರಣಕ್ಕೆ ತೀರ್ಮಾನಿಸಲಾಗಿದೆ.
ಟಿಡಿಎಸ್ ಮರುಪಾವತಿ ವಿಳಂಬ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದ್ದು, ಇ-ಕಾಮರ್ಸ್ ಮೇಲಿನ ತೆರಿಗೆ ಇಳಿಕೆಗೆ ನಿರ್ಧರಿಸಲಾಗಿದೆ. ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ.
ಜಿಎಸ್‌ಟಿ ಇನ್ನಷ್ಟು ಸರಳ
ಜಿಎಸ್‌ಟಿ ಬಡವರ ಮೇಲಿನ ತೆರಿಗೆ ಹೊರೆ ಇಳಿಸಿದೆ, ಜಿಎಸ್‌ಟಿ ಇನ್ನಷ್ಟು ಸರಳಗೊಳಿಸಲಾಗುವುದು, ಕಸ್ಟಮ್ಸ್ ಸುಂಕವನ್ನು ಇನ್ನಷ್ಟು ಇಳಿಸುವ ಪ್ರಸ್ತಾಪವಿದ್ದು, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ.
ಒಟ್ಟಾರೆ ಶೇ.15ರಷ್ಟು ಕಸ್ಟಮ್ಸ್ ಸುಂಕ ಇಳಿಕೆ ಮಾಡಲಾಗಿದೆ, ಆಮದು ಮೊಬೈಲ್, ಮೊಬೈಲ್ ಭಾಗಗಳ ಮೇಲಿನ ಸುಂಕದಲ್ಲಿ ಇಳಿಕೆ ಮಾಡಲಾಗಿದೆ.
ಚಿನ್ನ ಹಾಗೂ ಬೆಳ್ಳಿಯ ಮೇಲಿನ ಅಬಕಾರಿ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗಿದ್ದು, ಇದರಿಂದ ಚಿನ್ನದ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ.
ಆದಾಯ ತೆರಿಗೆ ಪದ್ಧತಿ ಸ್ಲ್ಯಾಬ್ಸ್‌ಗಳು
ಬಹುನಿರೀಕ್ಷಿತ ಆದಾಯ ತೆರಿಗೆ ಪದ್ಧತಿಯಡಿ ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ಸ್ ಈ ರೀತಿ ಇದೆ. ಶೂನ್ಯದಿಂದ 3 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ, 3 ರಿಂದ 7 ಲಕ್ಷ ರೂ.ವರೆಗಿನ ಆದಾಯಕ್ಕೆ 5% ತೆರಿಗೆ, 7 ರಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ 10% ತೆರಿಗೆ, 10 ರಿಂದ 12 ಲಕ್ಷ ರೂ.ವರೆಗಿನ ಆದಾಯಕ್ಕೆ 15% ತೆರಿಗೆ, 12 ರಿಂದ 15 ಲಕ್ಷ ರೂ.ವರೆಗಿನ ಆದಾಯಕ್ಕೆ 20% ತೆರಿಗೆ, 15 ಲಕ್ಷ ರೂ.ಗಿಂತ ಹೆಚ್ಚು ಆದಾಯಕ್ಕೆ 30% ತೆರಿಗೆ ನಿಗದಿಪಡಿಸಲಾಗಿದೆ.
ಹಳೆಯ ತೆರಿಗೆ ಪದ್ಧತಿಯ ಸ್ಲ್ಯಾಬ್ಸ್: ಆದಾಯ ವಿಧಿಸುವ ತೆರಿಗೆ ವಿಧಾನದಲ್ಲಿ 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ, 2.5 ಲಕ್ಷ ರೂ.ನಿಂದ 3 ಲಕ್ಷ ರೂ.ವರೆಗಿನ ಆದಾಯಕ್ಕೆ 5% ತೆರಿಗೆ, 3 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ 5% ತೆರಿಗೆ, 5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ 20% ತೆರಿಗೆ ಹಾಗೂ 10 ಲಕ್ಷ ರೂ.ಗಿಂತ ಹೆಚ್ಚು ಆದಾಯಕ್ಕೆ 30% ತೆರಿಗೆ ನಿಗದಿ ಪಡಿಸಲಾಗಿದೆ.
ಬಿಹಾರ-ಆಂಧ್ರಕ್ಕೆ ಬಂಪರ್
ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಆಡಳಿತ ರಾಜ್ಯಗಳಾದ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಯೊಜನೆ ಮತ್ತು ಧನಸಹಾಯಗಳನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು, ಹೆದ್ದಾರಿಗಳು ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಬೆಂಬಲ ಘೋಷಿಸಲಾಗಿದೆ.
ಆಂಧ್ರಪ್ರದೇಶದ ಕೃಷಿ ಸಮುದಾಯಕ್ಕೆ ಪೊಲ್ಲಾವರಂ ನೀರಾವರಿ ಯೋಜನೆಗೆ ಧನಸಹಾಯ, ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಮೊತ್ತಗಳೊಂದಿಗೆ 15,000 ಕೋಟಿ ರೂ. ವಿತರಣೆ.
ಅಭಿವೃದ್ಧಿ ಬ್ಯಾಂಕ್‌ಗಳಿಂದ ಬಾಹ್ಯ ಸಹಾಯಕ್ಕಾಗಿ ಬಿಹಾರ ಸರ್ಕಾರದ ಮನವಿಯನ್ನು ತ್ವರಿತವಾಗಿ ಪರಿಗಣಿಸಲಾಗುವುದು, ಬಿಹಾರದ ವಿವಿಧ ರಸ್ತೆ ಯೋಜನೆಗಳಿಗೆ ಕೇಂದ್ರ ಸರ್ಕಾರ 26,000 ಕೋಟಿ ರೂ. ಮೀಸಲಿಟ್ಟಿದೆ.
ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟಾರೆ ಅಭಿವೃದ್ಧಿಗೆ ‘ಪೂರ್ವೋದಯ’ ಸಮಗ್ರ ಯೋಜನೆ, ಪೂರ್ವ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ರಚನೆಗೆ ಬೆಂಬಲ ನೀಡಲಿದೆ ಎಂದು ನಿರ್ಮಲಾ ಸೀತರಾಮನ್ ತಿಳಿಸಿದರು.