ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ವಿರುದ್ಧವೇ ರಾಜ್ಯ ಸರ್ಕಾರ ತಿರುಗಿಬಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಸಹೋದ್ಯೋಗಿಗಳು ಕೇಂದ್ರ ಸಂಸ್ಥೆಯ ತನಿಖಾಧಿಕಾರಿಗಳನ್ನು ಬಂಧಿಸುವಂತೆ ಇಂದಿಲ್ಲಿ ಧರಣಿ ನಡೆಸಿದರು.
ಹಗರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಎಡೆ ಮಾಡಿದ್ದು ಸಿದ್ದರಾಮಯ್ಯ ಅವರು, ಪಶ್ಚಿಮ ಬಂಗಾಳ ಸರ್ಕಾರ ಸಿಬಿಐ ವಿರುದ್ಧ ಟೊಂಕ ಕಟ್ಟಿ ನಿಂತಂತೆ ಇ.ಡಿ. ವಿರುದ್ಧ ಸಿಡಿದೆದ್ದಿದ್ದಾರೆ.
ತನ್ನನ್ನೇ ಹಗರಣದಲ್ಲಿ ಸಿಲುಕಿಸಲು ಇ.ಡಿ. ಅಧಿಕಾರಿಗಳು ಸಂಚು ರೂಪಿಸುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿರುವುದಲ್ಲದೆ, ಕೇಂದ್ರದ ಕೈಗೊಂಬೆಯಾಗಿರುವ ತನಿಖಾಧಿಕಾರಿಗಳನ್ನು ಬಂಧಿಸಲು ಮುಂದಾಗಿದ್ದಾರೆ.
ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ
ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಅವರು, ತಮ್ಮನ್ನು, ಉಪಮುಖ್ಯಮಂತ್ರಿ ಹಾಗೂ ಕೆಲವು ಸಚಿವರನ್ನು ಕೇಂದ್ರ ಸರ್ಕಾರ ಹಗರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದೆ.
ಬಿಜೆಪಿಯೇತರ ಆಡಳಿತದ ಕೆಲವು ಮುಖ್ಯಮಂತ್ರಿಗಳನ್ನು ಇ.ಡಿ. ಹೇಗೆ ಹಗರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿತ್ತೋ, ಅದೇ ರೀತಿ ಕಾರ್ಯವನ್ನು ಕರ್ನಾಟಕದಲ್ಲೂ ಮಾಡುತ್ತಿದೆ.
ಕೇಂದ್ರದ ಕೈಗೊಂಬೆಯಾಗಿರುವ ಇ.ಡಿ. ಮತ್ತು ಸಿಬಿಐ ವಿರುದ್ಧ ನಾನು ಹೋರಾಟ ಮಾಡುತ್ತೇನೆ, ಬುದ್ಧಿ ಕಲಿಸುತ್ತೇನೆ ಎಂದು ಶಪಥ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ರಾಷ್ಟ್ರದ ಗಮನ ಸೆಳೆಯಲು ಧರಣಿ ನಡೆಸಿದರು.
ಕಾನೂನಿನ ಹೋರಾಟಕ್ಕೆ ಸಿದ್ಧ
ಧರಣಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ಕುರಿತ ಎಸ್‌ಐಟಿ ತನಿಖೆ ಮುಗಿದಿದೆ, ಇ.ಡಿ., ಸಿಬಿಐ ಏನೇ ಇರಲಿ ಕಾನೂನಿನ ಹೋರಾಟಕ್ಕೆ ಸಿದ್ಧ ಎಂದರು.
ರಾಜಕೀಯ ಸೇಡು, ದ್ವೇಷದ ನಡೆಯನ್ನು ಕಾಂಗ್ರೆಸ್ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ, ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆಯಿದು, ಕಾನೂನುಬಾಹಿರವಾಗಿ ತನಿಖೆ ಮಾಡುವಂತಿಲ್ಲ, ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಿದ್ದು ಇ.ಡಿ. ದುರುಪಯೋಗ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿಲಾಗಿದೆ.
ಹಗರಣದಲ್ಲಿನ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಯಾರೇ ತಪ್ಪು ಮಾಡಿದ್ದರೂ ಮುಲಾಜಿಗೆ ಒಳಗಾಗುವುದಿಲ್ಲ, ಯಾರನ್ನೂ ರಕ್ಷಣೆ ಮಾಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟೇ ಕೊಡುತ್ತೇವೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.
ಸದನದ ಹೊರಗೆ ಹೋರಾಟ
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಪ್ರಸ್ತಾಪಿಸಲಿದ್ದೇವೆ, ಸದನದ ಹೊರಗೆ ಹೋರಾಟ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕುರಿತು ಮೂರು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ, ಎಸ್.ಐ.ಟಿ.ಯನ್ನು ಮೇ 31ರಂದು ರಚಿಸಲಾಗಿದೆ, ಜೂನ್ 3ರಂದು ಬ್ಯಾಂಕ್ ವತಿಯಿಂದ ಸಿಬಿಐಗೆ ದೂರು ನೀಡಲಾಗಿದೆ, ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಣೆಯಿಂದ ತನಿಖೆ ಮಾಡುತ್ತಿದೆ.
ಒಂದೇ ಹಗರಣದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿರುವುದು ವಿಶೇಷ, ಮೂರು ತನಿಖಾ ಸಂಸ್ಥೆಗಳು ಒಂದೇ ಪ್ರಕರಣದ ಬಗ್ಗೆ ತನಿಖೆ ಮಾಡುವುದು ಈವರೆಗೆ ನನ್ನ ಅನುಭವಕ್ಕೆ ಬಂದಿರಲಿಲ್ಲ ಎಂದರು.
ಅಕ್ರಮ ನಡೆದಿಲ್ಲ ಎನ್ನುತ್ತಿಲ್ಲ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂಬುದಾಗಿ ನಾವು ಹೇಳಿಲ್ಲ, ವಿರೋಧ ಪಕ್ಷದವರು ಪದೇ ಪದೇ 187.33 ಕೋಟಿ ರೂ.ಗಳ ದುರುಪಯೋಗವಾಗಿದೆ ಎಂದು ಆರೋಪಿಸುತ್ತಿದ್ದಾರೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ತೆಲಂಗಾಣಕ್ಕೆ ಹೋಗಿರುವುದು ಕೇವಲ 89.63 ಕೋಟಿ ರೂ. ಮಾತ್ರ, ಎಸ್‌ಐಟಿ ರಚನೆ ನಂತರ ತ್ವರಿತ ತನಿಖೆ ನಡೆಸಲಾಗುತ್ತಿದೆ.
ಈಗಾಗಲೇ 12 ಮಂದಿಯನ್ನು ಬಂಧಿಸಿದ್ದು, ಹಣ ಹಂಚಿಕೊಂಡಿದ್ದ ಮೊತ್ತದಲ್ಲಿ ಇದುವರೆಗೆ 34 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ, ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್, ರತ್ನಾಕರ ಬ್ಯಾಂಕ್ ಸೇರಿದಂತೆ ಒಟ್ಟು 85.25 ಕೋಟಿ ರೂ. ಹಿಂಪಡೆದು, ಮುಟ್ಟುಗೋಲು ಹಾಕಿಕೊಂಡಿದ್ದಾರೆ, ಒಟ್ಟು ಅಕ್ರಮವಾಗಿರುವುದು 85.63 ಕೋಟಿ ರೂ. ಮಾತ್ರ ಎಸ್‌ಐಟಿ ಶೇ.95ರಷ್ಟು ತನಿಖೆ ಪೂರ್ಣಗೊಳಿಸಿದೆ ಎಂದರು.
ಅಕ್ರಮ ನಡೆಯಲು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ, ಉಪವ್ಯವಸ್ಥಾಪಕರು, ಕ್ರೆಡಿಟ್ ಅಧಿಕಾರಿಗಳು ಕಾರಣ ಎಂದು ಬ್ಯಾಂಕ್‌ನಿಂದ ದೂರು ನೀಡಲಾಗಿದ್ದು ಸಿಬಿಐ ತನಿಖೆ ನಡೆಸುತ್ತಿದೆ.
ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ದಾಳಿ ಮಾಡಲಾಗಿದೆ, ನಾಗೇಂದ್ರ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿ ಇಟ್ಟಿದ್ದಾರೆ.
ಸಚಿವರ ಹೆಸರು ಹೇಳುವಂತೆ ಒತ್ತಾಯ
ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಹೇಳಿಕೆ ಕೊಟ್ಟಿದ್ದರೂ, ಮುಖ್ಯಮಂತ್ರಿ ಹಾಗೂ ಇತರ ಸಚಿವರ ಹೆಸರುಗಳನ್ನು ಬರೆದು ಕೊಡುವಂತೆ ಒತ್ತಾಯ ಮಾಡಲಾಗುತ್ತಿದೆ.
187.33 ಕೋಟಿ ರೂ.ಗಳಲ್ಲಿ 43.33 ಕೋಟಿ ರೂ. ಖಜಾನೆಯಿಂದ ಹೋಗಿದೆ, ಅದಕ್ಕೂ ನಮಗೂ ಸಂಬಂಧವಿಲ್ಲ, ನಮ್ಮ ಹಾಗೂ ಆರ್ಥಿಕ ಇಲಾಖೆ ಪಾತ್ರ ಇಲ್ಲ, ಒಮ್ಮೆ ಬಜೆಟ್ ಅನುಮೋದನೆ ದೊರೆತ ನಂತರ ಅನುದಾನ ಕಾರ್ಯದರ್ಶಿಗಳಿಗೆ, ಅಲ್ಲಿಂದ ನಿರ್ದೇಶಕರಿಗೆ ಹೋಗುತ್ತದೆ, ನಿರ್ದೇಶಕರು ಅನುದಾನವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡುತ್ತಾರೆ, ಇದು ಸಹಜ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡರು.
ಕಲ್ಲೇಶ್ ಅವರನ್ನು ಹೆದರಿಸಿ, ಬೆದರಿಸಿ, ಜೀವ ಭಯ ಉಂಟು ಮಾಡಿ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಜಾರಿ ನಿರ್ದೇನಾಲಯದ ತನಿಖಾಧಿಕಾರಿಗಳು ಬೆದರಿಸಿದ್ದಾರೆ, ಕಾನೂನಿನಡಿ ನನ್ನ ಮೇಲೆ ಆರೋಪ ಬರುವಂತೆ ಒತ್ತಾಯಿಸಿದ್ದಾರೆ, ಕಲ್ಲೇಶ್ ದೂರು ನೀಡಿ ಪ್ರಕರಣ ದಾಖಲಾಗಿದೆ, ದೂರಿನಲ್ಲಿ ಏನೇನು ನಡೆಯಿತು ಎಂಬುದನ್ನು ವಿವರಿಸಿದ್ದಾರೆ.
ಕೇಂದ್ರದ ವಾಮ ಮಾರ್ಗ
ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಕೇಂದ್ರ ವಾಮ ಮಾರ್ಗ ಅನುಸರಿಸುತ್ತಿದೆ, ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡು ನನ್ನ ಮತ್ತು ಸರ್ಕಾರದ ವರ್ಚಸ್ಸು ಹಾಳು ಮಾಡುವ ಯತ್ನ ನಡೆದಿದೆ.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರುದ್ಧ ಇದೆ ಎಂಬುದಾಗಿ ರಾಜ್ಯದ ಜನತೆ ಮುಂದೆ ಬಿಂಬಿಸಲು ಹೊರಟಿದ್ದಾರೆ, ಸರ್ಕಾರ ಎಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ದುರ್ಬಲ ವರ್ಗ, ಬಡವರು, ರೈತರು, ಕಾರ್ಮಿಕರ ಪರವಾಗಿದೆ.
ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂಬ ಉದ್ದೇಶದಿಂದ ವಾಮ ಮಾರ್ಗ ಅನುಸರಿಸುತ್ತಿದ್ದಾರೆ, ಆರ್ಥಿಕ ಇಲಾಖೆಯಾಗಲಿ, ಮುಖ್ಯಮಂತ್ರಿಯಾಗಲಿ ಈ ಹಗರಣಕ್ಕೆ ಸಂಬಂಧಪಟ್ಟಿಲ್ಲ, ಹಗರಣ ನಡೆದಿರುವುದಕ್ಕೆ ತನಿಖೆ ಮಾಡಿಸುತ್ತಿದ್ದೇವೆ.
ತನಿಖೆ ಸರಿಯಾಗಿ ಸಾಗಿದೆ
ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ ನೀಡಿರುವ ದೂರು, ಪದ್ಮನಾಭ ಅವರ ದೂರಿನನ್ವಯ ತನಿಖೆ ಸರಿಯಾದ ದಾರಿಯಲ್ಲಿ ಸಾಗಿದೆ ಎಂದರು.
ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್, ಎ.ಪಿ.ಎಂ.ಸಿ ಹಾಗೂ ಕೋವಿಡ್ ಹಗರಣಗಳ ತನಿಖೆಗೆ ಇ.ಡಿ. ಬರಲಿಲ್ಲ, ಸಿಬಿಐಗೆ ವಹಿಸುವಂತೆ ಬಿಜೆಪಿಯವರು ಹೇಳುತ್ತಾರೆ, ಅವರು ವಿರೋಧಪಕ್ಷದಲ್ಲಿದ್ದಾಗ ಸಿಬಿಐ ಅನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು.
ಅವರ ಸರ್ಕಾರ ಕೇಂದ್ರದಲ್ಲಿರುವುದರಿಂದ ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ, ನಾವು ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ, ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಪ್ರಕರಣ, ಪರೇಶ್ ಮೆಹ್ತಾ, ರವಿ, ಗಣಪತಿ, ಲಾಟರಿ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ.
ವಿವೇಚನೆ ಆಧರಿಸಿ ಸರ್ಕಾರ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುತ್ತದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿ ಪ್ರಕಾರ 25 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವಿದ್ದರೆ ಸಿಬಿಐ ತನಿಖೆ ಮಾಡಬಹುದು, ತನಿಖೆಗೆ ನಮ್ಮ ತಕರಾರಿಲ್ಲ, ಆದರೆ ಕಾನೂನುಬಾಹಿರ ತನಿಖೆ ಮಾಡುವುದನ್ನು ಖಂಡಿಸುತ್ತೇವೆ ಎಂದರು.