ಬೆಂಗಳೂರು:ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು, ಬರಹ ಮತ್ತು ವಿಚಾರಧಾರೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಅನಾವರಣಗೊಳಿಸಲು ಮಾಧ್ಯಮ ಅನೇಕ ಸಂಸ್ಥೆ ಮುಂದಾಗಿದೆ.
ಸಾಕ್ಷ್ಯ ಚಿತ್ರದಲ್ಲಿ 30ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಅವರ ಆಪ್ತ ಸ್ನೇಹಿತರು, ತೇಜಸ್ವಿ ಅವರೊಂದಿಗಿನ ತಮ್ಮ ನೆನಪು, ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಆರು ಕಂತುಗಳ ಸರಣಿ
ಆರು ಕಂತುಗಳನ್ನು ಒಳಗೊಂಡ ಸರಣಿಯ ಪ್ರಾಸ್ತಾವಿಕ ಕಂತು ’ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರದ ಮುನ್ನುಡಿ ಈಗಾಗಲೇ ಬಿಡುಗಡೆಯಾಗಿದೆ.
ಇದೀಗ ಚಿತ್ರದ ಸರಣಿಯನ್ನು ಜುಲೈ 28ರಂದು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಿಡುಗಡೆ ಮಾಡಲಿದ್ದಾರೆ.
ಬಹುಮುಖ ವ್ಯಕ್ತಿತ್ವ
ಬಹುಮುಖ ವ್ಯಕ್ತಿತ್ವ ಹೊಂದಿದ್ದ ತೇಜಸ್ವಿ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೇ ಅಲ್ಲದೆ, ಪರಿಸರ ಪ್ರಿಯರಾಗಿ, ಕೃಷಿ, ಸಾಹಿತಿ, ಪಕ್ಷಿ ಹಾಗೂ ಪ್ರಕೃತಿ ತಜ್ಞ, ಛಾಯಾಗ್ರಾಹಕ, ವಿಜ್ಞಾನಿ, ವಿದ್ವಾಂಸರಾಗಿ ಹಲವು ಬದುಕುಗಳನ್ನು ಶೋಧಿಸಿ, ಸಾಧಿಸಿ, ಇತರರಿಗೂ ಅರಿವಾಗಲೆಂದು ಕೃತಿಗಳಲ್ಲಿ ದಾಖಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ತೇಜಸ್ವಿ ಅವರ ಸಮಗ್ರ ಕೃತಿ ಜಗತ್ತು 14 ಸಂಪುಟಗಳು ಬಿಡುಗಡೆಗೊಳ್ಳಲಿವೆ.
ಜುಲೈ 28 ಮತ್ತು 29 ರಂದು ಕಲಾಕ್ಷೇತ್ರದಲ್ಲಿ ತೇಜಸ್ವಿ ಸಾಹಿತ್ಯ, ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ.