ಬೆಂಗಳೂರು:ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಹಾಗೂ ಮುಡಾ ಹಗರಣಗಳಲ್ಲಿನ ಭ್ರಷ್ಟಾಚಾರ ಖಂಡಿಸಿ ದೆಹಲಿಯ ಸಂಸತ್ ಭವನದ ಆವರಣದಲ್ಲಿಂದು ಬಿಜೆಪಿ ಹಾಗೂ ಜೆಡಿಎಸ್ ಸಂಸದರು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ನಿಗಮದ ಹಣ ದುರುಪಯೋಗ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಖಾಲಿ ನಿವೇಶನಗಳನ್ನು ಕಾನೂನಾತ್ಮಕವಾಗಿ ಹರಾಜು ಮಾಡದೆ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ, ಕರ್ನಾಟಕ ಬಿಜೆಪಿ ಹಾಗೂ ಜೆಡಿಎಸ್‌ನ ಎರಡೂ ಸದನಗಳ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕರ್ನಾಟಕದಲ್ಲಿ ದಲಿತರ ಹಣ ಲೂಟಿ
ಕರ್ನಾಟಕದಲ್ಲಿ ದಲಿತರ ಹಣವನ್ನು ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದೆ, ರಾಹುಲ್ ಗಾಂಧಿ ಎಲ್ಲಿದ್ದಾರೆ ಎಲ್ಲಿದ್ದಾರೆ’ ‘ಹಠಾವೋ, ಹಠಾವೋ ಭ್ರಷ್ಟ ಮುಖ್ಯಮಂತ್ರಿ ಕೋ ಹಠಾವೋ’ ಎಂಬ ಘೋಷಣೆಗಳನ್ನು ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಕೂಗಿದರು.
‘ರಿಟರ್ನ್ ದಿ ಲೂಟೆಡ್ ಮನಿ ಬಿಲಾಂಗಿಂಗ್ ಟು ಎಸ್‌ಟಿ ಕಮ್ಯುನಿಟಿ’, ’ಮುಡಾ ಹಗರಣದಲ್ಲಿ ಕೋಟಿ ಕೋಟಿ ರೂ. ನುಂಗಿದ ಸಿದ್ದರಾಮಯ್ಯನವರಿಗೆ ಧಿಕ್ಕಾರ’ ಎಂಬ ಬಿತ್ತಿ ಪತ್ರಗಳನ್ನು ಸಂಸದರು ಪ್ರದರ್ಶಿಸಿದರು.
ಹಗರಣ ಮುಚ್ಚಿ ಹಾಕುವ ಹುನ್ನಾರ
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ-ಜೆಡಿಎಸ್ ಶಾಸಕರಿಗೆ ಮುಡಾ ಹಗರಣ ಕುರಿತು ಮಾತನಾಡಲು ಅವಕಾಶ ನೀಡಿಲ್ಲ, ಇದು ಹಗರಣ ಮುಚ್ಚಿ ಹಾಕುವ ಹುನ್ನಾರವಾಗಿದೆ, ಪ್ರತಿಪಕ್ಷ ಶಾಸಕರು ಅಹೋರಾತ್ರಿ ಧರಣಿ ಮಾಡಿದ್ದಾರೆ, ನಾವೂ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆದಿದೆ, ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ, ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಜವಾಬ್ದಾರರು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪಿ.ಸಿ.ಮೋಹನ್ ಮಾತನಾಡಿ, ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.