ಬೆಂಗಳೂರು:ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕರು ಹಾಗೂ ಮುಖಂಡರೂ ಆದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎನ್.ಮಂಜೇಗೌಡ ಸೇರಿದಂತೆ ಅನೇಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬಿಡಿ ನಿವೇಶನಗಳನ್ನು ಪಡೆದಿದ್ದಾರೆಂದು ರಾಜ್ಯ ಸರ್ಕಾರ ಇಂದಿಲ್ಲಿ ಆರೋಪಿಸಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲೇ ಈ ಮಾಹಿತಿ ಹಂಚಿಕೊಂಡ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ತಲಾ ಎರಡು ನಿವೇಶನಗಳನ್ನು ಪಡೆದಿದ್ದಾರೆ ಎಂದರು.
ದಾಖಲೆ ಬಿಡುಗಡೆ
ಸಿ.ಎನ್.ಮಂಜೇಗೌಡ ನಾಲ್ಕು ನಿವೇಶನ ಪಡೆದಿದ್ದರೆ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒಂದು ನಿವೇಶನವನ್ನು, ಉಳಿದಂತೆ ಯು.ಎಸ್.ಶೇಖರ್, ಗಂಗರಾಜು, ಜೂನಿಯರ್ ಮಹದೇವಸ್ವಾಮಿ, ಜೂನಿಯರ್ ಶಿವಕುಮಾರ್ ಬಿಡಿ ನಿವೇಶನ ಪಡೆದವರಲ್ಲಿ ಪ್ರಮುಖರು ಎಂದು ದಾಖಲೆ ಬಿಡುಗಡೆ ಮಾಡಿದರು.
ಕುಮಾರಸ್ವಾಮಿ ಅವರು 1984ರಲ್ಲೇ 300×200 ಅಳತೆಯ ಕೈಗಾರಿಕಾ ನಿವೇಶನ ಪಡೆದು ಅದನ್ನು ಬದಲಿ ನಿವೇಶನ ಮಾಡಿಕೊಡುವಂತೆಯೂ ಕೋರಿದ್ದಾರೆ.
ಅಷ್ಟೇ ಅಲ್ಲ ಇವರ 12 ಮಂದಿ ಹತ್ತಿರದ ಸಂಬಂಧೀಕರಿಗೆ ವಿವಿಧ ಅಳತೆಯ ಪ್ರಾಧಿಕಾರದ ನಿವೇಶನ ಪಡೆದಿದ್ದಾರೆ ಎಂದರು.
ಕೃತಕ ವಿವಾದ
ಬಿಜೆಪಿ ಮತ್ತು ಜೆಡಿಎಸ್, ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದ ಆಗಿಸಲು ಸಂಸತ್‌ನಲ್ಲೂ ಪ್ರಯತ್ನಿಸುತ್ತಿದ್ದಾರೆ, ಇವರು ಜನರಿಗೆ ಆಗಿರುವ ಅನ್ಯಾಯ ಪ್ರಸ್ತಾಪ ಮಾಡದೆ, ಮುಡಾ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ವಿಧಾನಸಭೆಯನ್ನೂ ರಾಜಕಾರಣಕ್ಕೆ ಬಳಸಿಕೊಂಡವರು, ಈಗ ಸಂಸತ್‌ಗೂ ಹೋಗಿದ್ದಾರೆ, ಆದರೆ, ಈ ಪಕ್ಷಗಳ ಮುಖಂಡರು, ಶಾಸಕರು ಮತ್ತು ಸಂಬಂಧಿಗಳು ನಿವೇಶನ ಪಡೆದ ದಾಖಲೆಗಳನ್ನು ಬೈರತಿ ಸುರೇಶ್ ಬಿಡುಗಡೆ ಮಾಡಿದರು.