ಮುಡಾ ಹಗರಣ : ಬಿಜೆಪಿ-ಜೆಡಿಎಸ್ ನ ಪಾದಯಾತ್ರೆ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ದಿನನಿತ್ಯ ಭ್ರಚ್ಟಾಚಾರ ಆರೋಪಗಳನ್ನು ಹೊರಿಸುತ್ತಿರುವ ಬಿಜೆಪಿ-ಜೆಡಿಎಸ್ ವಿರುದ್ಧ ಮೈಸೂರಿನಲ್ಲಿ ’ಸತ್ಯ ಸಂದೇಶ’ ಎಂಬ ಬೃಹತ್ ಸಮಾವೇಶವನ್ನು ಪ್ರದೇಶ ಕಾಂಗ್ರೆಸ್ ಹಮ್ಮಿಕೊಳ್ಳುತ್ತಿದೆ.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ, ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ಬಿಡಿ ನಿವೇಶನ ಹಂಚಿಕೆ ಹಗರಣ ಮುಂದಿಟ್ಟುಕೊಂಡು ಪ್ರತಿಪಕ್ಷಗಳ ನಾಯಕರು ದಿನನಿತ್ಯ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯವಹಾರ ಆರೋಪ ಬರುತ್ತಿದ್ದಂತೆ ಸರ್ಕಾರ ಎಸ್‌ಐಟಿ ರಚನೆ ಮಾಡಿ, ಇಲಾಖಾ ಸಚಿವರ ರಾಜೀನಾಮೆ ಪಡೆದು, ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದೆ, ಅಷ್ಟೇ ಅಲ್ಲದೆ, ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಮತ್ತು ಇ.ಡಿ. ಪ್ರತ್ಯೇಕ ತನಿಖೆಗಳನ್ನು ನಡೆಸುತ್ತಿವೆ.
ಮುಖ್ಯಮಂತ್ರಿ ಅವರ ಕುಟುಂಬ ಕಾನೂನು ಬದ್ಧವಾಗಿ ಮುಡಾದಿಂದ ಬಿಡಿ ನಿವೇಶನಗಳನ್ನು ಪಡೆದಿದ್ದರೂ ಅದನ್ನು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆಯೇ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಮಾಡಿ ಜನಪರ ವಿಷಯಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ, ಸಂಸತ್‌ನಲ್ಲೂ ಇದರ ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಕಪ್ಪುಚುಕ್ಕಿ ಇಡುವ ಕೆಲಸ ಮಾಡುತ್ತಿದ್ದಾರೆ.
ಇದೀಗ ಬೆಂಗಳೂರಿನಿಂದ ಮೈಸೂರಿಗೆ ಉಭಯ ಪಕ್ಷಗಳು ಪಾದಯಾತ್ರೆ ಹಮ್ಮಿಕೊಂಡಿವೆ, ಇವರು ಪಾದಯಾತ್ರೆ ನಡೆಸುವ ತೀರ್ಮಾನ ಕೈಗೊಂಡಿದ್ದೇ ಆದಲ್ಲಿ, ಯಾತ್ರೆ ಸಂದರ್ಭದಲ್ಲೇ ಸತ್ಯ ಸಂದೇಶ ಸಮಾವೇಶ ನಡೆಸಿ ರಾಜ್ಯದ ಜನತೆ ಮುಂದೆ ಸತ್ಯ ಬಿಚ್ಚಿಡಲು ಕಾಂಗ್ರೆಸ್ ಮುಂದಾಗಿದೆ.
ಪಾದಯಾತ್ರೆಗೆ ಪ್ರತಿಯಾಗಿ ಪಾದಯಾತ್ರೆ ಮಾಡದಿರಲು ಕಾಂಗ್ರೆಸ್ ತೀರ್ಮಾನಿಸಿದ್ದು, ಸಮಾವೇಶದ ಮೂಲಕವೇ ಪ್ರತಿಪಕ್ಷಗಳಿಗೆ ಉತ್ತರ ನೀಡಲು ಮುಂದಾಗಿದೆ.
ಅಷ್ಟೇ ಅಲ್ಲ, ಜಿಲ್ಲಾ ಕೇಂದ್ರಗಳಲ್ಲೂ ಸಮಾವೇಶ ನಡೆಸಿ ಬಿಜೆಪಿ-ಜೆಡಿಎಸ್ ಆರೋಪಗಳಿಗೆ ಉತ್ತರ ನೀಡಲು ತೀರ್ಮಾನಿಸಿದೆ.
ಕಾಂಗ್ರೆಸ್ ಹಗರಣಗಳಿಗೆ ಸಂಬಂಧಿಸಿದಂತೆ ಪಾದಯಾತ್ರೆ ಎಂದು ನಡೆಸಬೇಕು. ಅದರ ರೂಪುರೇಷೆ ಹೇಗಿರಬೇಕು ಎಂಬ ಬಗ್ಗೆ ನಾಳೆ ಎನ್‌ಡಿಎ ಮಿತ್ರ ಪಕ್ಷಗಳು ಸಭೆ ನಡೆಸಲಿವೆ.
ಎನ್‌ಡಿಎ ಸಭೆ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಕಾಂಗ್ರೆಸ್‌ನ ಸತ್ಯ ಸಂದೇಶದ ಸಭೆ ಮತ್ತು ದಿನಾಂಕ ನಿಗದಿಯಾಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.