ಬೆಂಗಳೂರು:ಜೆಡಿಎಸ್ ಪ್ರಾಬಲ್ಯ ಕ್ಷೇತ್ರಗಳಲ್ಲಿನ ಅಸ್ತಿತ್ವ ಉಳಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಜೊತೆ ಮೈತ್ರಿ ತಿಕ್ಕಾಟ ನಡೆಯುತ್ತಿರಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಜೆಡಿಎಸ್ ಬೆಂಬಲದೊಂದಿಗೆ ಸುಮಾರು 10 ಕ್ಷೇತ್ರಗಳನ್ನು ಗೆದ್ದಿದ್ದಾರೆ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ನೆಲೆ ಇರುವ ಪ್ರದೇಶ, ಈ ಭಾಗದಲ್ಲಿ ಮಿತ್ರ ಪಕ್ಷವನ್ನು ಪರಿಗಣಿಸದೇ ತಮಟೆ ಬಾರಿಸಿಕೊಂಡು ನಾಯಕತ್ವ ಅಪಹರಿಸಲು ಹೋದರೆ ಸಹಿಸಿಕೊಳ್ಳಲು ಸಾಧ್ಯವೇ ಎಂದರು.
ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ
ಜೆಡಿಎಸ್ ಹಾಗೂ ಬಿಜೆಪಿ ವಿಲೀನವಾಗುವುದಾದರೆ ಒಟ್ಟಿಗೆ ಪಾದಯಾತ್ರೆ ಮಾಡಬಹುದು, ಕುಮಾರಸ್ವಾಮಿಯಾಗಲಿ, ನಾನಾಗಲಿ, ಬಿಜೆಪಿಯವರಾಗಲಿ ಅವರವರ ಪಕ್ಷದ ರಾಜಕಾರಣ ಮಾಡುತ್ತಾರೆ, ಕುಮಾರಸ್ವಾಮಿ ತಮ್ಮ ಪಕ್ಷ ಹಾಗೂ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರಬಹುದು.
ಬಿಜೆಪಿ ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ, ಪಾದಯಾತ್ರೆಯ ಅಂತಿಮ ರೂಪುರೇಷೆ ಪ್ರಕಟಗೊಂಡ ನಂತರ ಕಾಂಗ್ರೆಸ್ ಕಾರ್ಯಸೂಚಿ ತೀರ್ಮಾನ ಮಾಡುತ್ತೇವೆ, ಬಿಜೆಪಿ ಸರ್ಕಾರದ ಕಾಲದ 30 ಹಗರಣಗಳಿವೆ, ಪಾದಯಾತ್ರೆ ವೇಳೆ ದಿನಕ್ಕೊಂದು ಹಗರಣ ಬಿಚ್ಚಿಡುತ್ತೇವೆ, ಪೆನ್‌ಡ್ರೈವ್ ವಿಚಾರ ಈಗ ಬೇಡ, ಪಾದಯಾತ್ರೆ ಬಗ್ಗೆ ಚರ್ಚೆ ಮಾಡೋಣ ಎಂದರು.
