ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮವಾಗಿ ತಮ್ಮ ಕುಟುಂಬದವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿವೇಶನ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕ್ರಿಮಿನಲ್ ಪ್ರೊಸೀಜರ್‌ಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ನಾಳೆಯಿಂದ (ಆಗಸ್ಟ್ 3) ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳನ್ನು ಜನರಿಗೆ ತಿಳಿಸಲು ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಒಂದು ವಾರ ಕಾಲ ಪಾದಯಾತ್ರೆ ನಡೆಸುತ್ತಿವೆ.
ನಗರದ ಹೊರವಲಯದ ಕೆಂಗೇರಿ ಸಮೀಪದಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಹೋರಾಟ ತಾರ್ಕಿಕ ಅಂತ್ಯಕ್ಕೆ
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿವೆ ಎಂದರು.
ಪಾದಯಾತ್ರೆಯ ರೂಟ್ ಮ್ಯಾಪ್ ಸಿದ್ಧಗೊಂಡಿದ್ದು, ನಾಳೆ ಬೆಳಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿಯ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಆರಂಭವಾಗಲಿರುವ ಪಾದಯಾತ್ರೆ ಮೈಸೂರಿಗೆ 8 ದಿನಗಳಲ್ಲಿ ಕ್ರಮಿಸಲಿದೆ.
ಮೊದಲ ದಿನ 16 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದ್ದು, ಎರಡನೇ ದಿನ 22 ಕಿಲೋ ಮೀಟರ್, ಮೂರನೇ ದಿನ ಸುಮಾರು 20 ಕಿಲೋ ಮೀಟರ್ ಕ್ರಮಿಸಲಿದೆ.
ಆಗಸ್ಟ್ 6ರಂದು ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್‌ನಿಂದ ಸುಮಾರು 20 ಕಿಲೋ ಮೀಟರ್ ಕ್ರಮಿಸಲಿದೆ, ಮರುದಿನ ಮಂಡ್ಯದ ಶಶಿಕಿರಣ್ ಕನ್ವೆನ್ಷನ್ ಹಾಲ್‌ನಿಂದ ಆರಂಭವಾಗಿ 16 ಕಿಲೋ ಮೀಟರ್ ಕ್ರಮಿಸಿ, ಆಗಸ್ಟ್ 8 ರಂದು ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿಯಿಂದ, 9ರಂದು ಶ್ರೀರಂಗಪಟ್ಟಣ ಮಂಜುನಾಥ ಕಲ್ಯಾಣಮಂಟಪದಿಂದ, ಆಗಸ್ಟ್ 10ರಂದು ಮೈಸೂರಿನಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದೆ.
ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳಲಿದ್ದು, ರಾಜ್ಯದ ಮೂಲೆ ಮೂಲೆಯಿಂದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸಲಿದ್ದಾರೆ ಎಂದರು.
ಪರಿಶಿಷ್ಟರ ವಿರೋಧಿ ಸರ್ಕಾರ
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟ, ಬಡವರ, ಪರಿಶಿಷ್ಟ ಸಮುದಾಯಗಳ ವಿರೋಧಿಯಾಗಿದೆ, ಅಭಿವೃದ್ಧಿ ಶೂನ್ಯ ಕೊಡುಗೆ ನೀಡಿದ್ದು, ಅಸಮರ್ಥ ಸರ್ಕಾರ ಎಂದರು.
ಅಹಿಂದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದ್ದಾರೆ, ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಲೂಟಿ ಮಾಡಿದ್ದಾರೆ.
ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆ ಮೂಲಕ ಅಪಾರ ಹಣ ಲೂಟಿ ಮಾಡಲಾಗಿದೆ, ನಮ್ಮ ಹೋರಾಟ ವ್ಯಕ್ತಿ ವಿರುದ್ಧ ಅಲ್ಲ, ಕೆಟ್ಟ ವ್ಯವಸ್ಥೆಯ ವಿರುದ್ಧ.
ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಹೋರಾಟ
ಸದನದ ಒಳಗೆ ಮತ್ತು ಹೊರಗೆ ಬಿಜೆಪಿ-ಜೆಡಿಎಸ್ ಜೊತೆಗೂಡಿ ಹೋರಾಟ ಮಾಡಿದ್ದು, ಹಗರಣಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ನಮ್ಮ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೊದಲು ಉತ್ತರಿಸಲಿ ಎಂದರು.
ನಿನ್ನೆ ಮುಖ್ಯಮಂತ್ರಿಗಳಿಲ್ಲದೇ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ, ಸಭೆ ರಾಜ್ಯಪಾಲರ ನೋಟಿಸ್ ಪ್ರಶ್ನಿಸುವ ಕೆಲಸ ಮಾಡಿದೆ.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಹಲವು ಸಚಿವರ ಮುಖದಲ್ಲಿ ಮಂದಹಾಸ ಇತ್ತು ಎಂಬ ವರದಿ ಇದೆ, ಮುಖ್ಯಮಂತ್ರಿಗಳ ಹಿಂದೆ ಯಾರಿದ್ದಾರೆ ಎಂಬುದಕ್ಕಿಂತ ವಿರುದ್ಧ ಯಾರಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಿರುವ ವಿಚಾರ ಎಂದು ಮಾರ್ಮಿಕವಾಗಿ ನುಡಿದರು.
ಜನರ ಕಿವಿಗೆ ಹೂ ಇಟ್ಟವರು
ಕಾಂಗ್ರೆಸ್ಸಿಗರದು ಪಶ್ಚಾತ್ತಾಪದ ಯಾತ್ರೆ, ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿ, ಜನರ ಕಿವಿಗೆ ಹೂವನ್ನು ಇಟ್ಟವರು ಪಶ್ಚಾತ್ತಾಪದ ಯಾತ್ರೆ ಮಾಡುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ಯಾತ್ರೆ ಯಶಸ್ಸಿಗಾಗಿ ಕಾಂಗ್ರೆಸ್ ಒಂದು ದಿನ ಮುಂಚಿತವಾಗಿ ಆಂದೋಲನ ಹಮ್ಮಿಕೊಂಡಿದೆ.
ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹಗರಣಗಳಿಗೆ ಉತ್ತರ ಕೊಡಬೇಕು, ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪವಾಗಿ ಪರಿಣಮಿಸಿದೆ, ಶಿವಕುಮಾರ್ ಬಾಯಲ್ಲಿ ಭ್ರಷ್ಟಾಚಾರ ಕುರಿತು ಮಾತು ಬರದಿರುವುದೇ ಒಳ್ಳೆಯದು ಎಂದರು.
ಒಳ ಮೀಸಲಾತಿ ಹೋರಾಟಕ್ಕೆ ಜಯ
ಸುಪ್ರೀಂಕೋರ್ಟ್ ನಿನ್ನೆ ಎಸ್‌ಸಿ, ಎಸ್‌ಟಿ ಒಳ ಮೀಸಲಾತಿ ವಿಚಾರದಲ್ಲಿ ನೀಡಿರುವ ತೀರ್ಪುನ ಬಗ್ಗೆ ಪ್ರತಿಕ್ರಿಯಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯಕ್ಕೆ ಅವಕಾಶ ನೀಡಿದೆ, ೩ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ವಿಶ್ಲೇಷಿಸಿದರು.
ಇದರಲ್ಲಿ ಬಿಜೆಪಿ ಪರಿಶ್ರಮವಿದೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ಹೆಚ್ಚಿಸಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಸಾಮಾಜಿಕ ನ್ಯಾಯದ ಪರ ನಿಂತವರು, ಒಳ ಮೀಸಲಾತಿ ಪರವಾಗಿ ಕೇಂದ್ರ ಸರ್ಕಾರ ವಕಾಲತ್ತು ಮಾಡಿತ್ತು.
ಸುಪ್ರೀಂಕೋರ್ಟ್ ತೀರ್ಪುನ್ನು ತುರ್ತಾಗಿ ಅನುಷ್ಠಾನಗೊಳಿಸಿ, ಎಲ್ಲ 101 ಜಾತಿಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.