ವಾಲ್ಮೀಕಿ ಹಗರಣ: 12 ಮಂದಿ ವಿರುದ್ಧ ಎಸ್‌ಐಟಿ ಪ್ರಾಥಮಿಕ ಆರೋಪಪಟ್ಟಿ
ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಕೋಟ್ಯಂತರ ರೂ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರನ್ನು ಹೊರಗಿಟ್ಟು 12 ಮಂದಿ ವಿರುದ್ಧ ಎಸ್‌ಐಟಿ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದೆ.
ನಿಗಮದ ಇಬ್ಬರು ಅಧಿಕಾರಿಗಳೂ ಸೇರಿದಂತೆ 12 ಮಂದಿ ವಿರುದ್ಧ 187 ಕೋಟಿ ರೂ. ಅಕ್ರಮ ವರ್ಗಾವಣೆ ನಡೆಸಿದ ಆರೋಪ ಹೊರಿಸಿದೆ.
10 ಮಧ್ಯವರ್ತಿಗಳಿಗೆ ಹಣ
ಅಧಿಕಾರಿಗಳ ಮೂಲಕ ಆಂಧ್ರಪ್ರದೇಶದ 10 ಮಂದಿ ಮಧ್ಯವರ್ತಿಗಳಿಗೆ ಈ ಹಣ ವರ್ಗಾವಣೆಗೊಂಡು ಭಾರೀ ಅವ್ಯವಹಾರಕ್ಕೆ ಕಾರಣವಾಗಿದೆ ಎಂದಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣ ಖಾತೆ ಸಚಿವರಾಗಿದ್ದ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿದ್ದ ದದ್ದಲ್ ಅವರನ್ನು ಸಂಪೂರ್ಣವಾಗಿ ಆರೋಪಪಟ್ಟಿಯಿಂದ ಹೊರಗಿಡಲಾಗಿದೆ.
ಪ್ರಕರಣ ಬಯಲಾಗುತ್ತಿದ್ದಂತೆ ಸರ್ಕಾರ ತನಿಖೆಗೆ ಎಸ್‌ಐಟಿ ರಚನೆ ಮಾಡಿದ್ದಲ್ಲದೆ, ಇಲಾಖೆ ಹೊಣೆ ಹೊತ್ತಿದ್ದ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಅವರ ರಾಜೀನಾಮೆ ಪಡೆಯಲಾಗಿತ್ತು.
ಇದಾದ ನಂತರ ಎಸ್‌ಐಟಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವ ವೇಳೆ ಕಾಂಗ್ರೆಸ್‌ನ ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆಗೊಳಿಸಿತ್ತು.
ದಾಖಲೆಗಳ ವಶ
ಇದರ ಮಧ್ಯೆ ಭಾರೀ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿದೇರ್ಶನಾಲಯ (ಇ.ಡಿ.) ತನಿಖೆ ಆರಂಭಿಸಿ, ಪ್ರಕರಣದ ಆರೋಪಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು.
ಇ.ಡಿ.ಗೆ ದೊರೆತ ಪ್ರಥಮ ಮಾಹಿತಿ ಆಧಾರದ ಮೇಲೆ ನಾಗೇಂದ್ರ ಅವರನ್ನು ವಶಕ್ಕೆ ಪಡೆದು ನಂತರ ನ್ಯಾಯಾಂಗ ಬಂಧನದಲ್ಲಿರಿಸಿದೆ.
ಕೋಟ್ಯಂತರ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
ಕೇಂದ್ರ ಸ್ವಾಮ್ಯದ ಉನ್ನತ ಸಂಸ್ಥೆಗಳು ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮಧ್ಯೆಯೇ ಎಸ್‌ಐಟಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.