ಸಹಾಯಕ ಪ್ರಾಧ್ಯಾಪಕರು, ನರ್ಸ್‌ಗಳ ನೇಮಕಾತಿ
ಬೆಂಗಳೂರು:ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ’ಗ್ರೂಪ್-ಎ’ನ 650 ಸಹಾಯಕ ಪ್ರಾಧ್ಯಾಪಕರು ಮತ್ತು 1,200 ನರ್ಸ್‌ಗಳನ್ನು (ದಾದಿಯರು) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ಮಾಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಸ್ಪರ್ಧಾತಕ ಪರೀಕ್ಷೆಗಳನ್ನು ನಡೆಸಿ ಹುದ್ದೆಗಳ ಭರ್ತಿ ಮಾಡಿಕೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಗ್ರೂಪ್-ಎ ಮತ್ತು ದಾದಿಯರ ನೇಮಕ
ಸಹಾಯಕ ಪ್ರಾಧ್ಯಾಪಕರು ಹಾಗೂ ನರ್ಸ್‌ಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಆರೋಪ ಬಂದ ಹಿನ್ನೆಲೆಯಲ್ಲಿ ಈ ಬಾರಿ ಗ್ರೂಪ್-ಎ ಮತ್ತು ದಾದಿಯರ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ರಾಜ್ಯದಲ್ಲಿ 22 ವೈದ್ಯಕೀಯ ಕಾಲೇಜುಗಳು ಮತ್ತು 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇದ್ದು, ನಿಯಮದಂತೆ ಯಾವುದೇ ಮುಲಾಜಿಗೆ ಒಳಗಾಗದೇ ನೇಮಕಾತಿ ನಡೆಯಬೇಕು, ಇದಕ್ಕಾಗಿ ನೇಮಕಾತಿ ಬೈಲಾಗಳನ್ನು ತಿದ್ದುಪಡಿ ಮಾಡಲಾಗುವುದು ಎಂದರು.
ಸಿ ಮತ್ತು ಆರ್ ನಿಯಮ ಪಾಲನೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ದಾದಿಯರ ನೇಮಕಾತಿಗೆ ಅನ್ವಯವಾಗುವ ಸಿ ಮತ್ತು ಆರ್ ನಿಯಮಗಳನ್ನು ಅನುಸರಿಸುವಂತೆ ಸಚಿವರು ಇಲಾಖೆ ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿಗೆ ಸೂಚಿಸಿದರು.
ಕೆಇಎಗೆ ನೇಮಕಾತಿ ನಿಲುವಳಿ ಹಸ್ತಾಂತರ ಹಾಗೂ ಸುಗಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತಜ್ಞರ ಸಮಿತಿ ರಚನೆಗೆ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಅವರಿಗೆ ಸಚಿವರು ಸೂಚಿಸಿದರು.