ಬೆಂಗಳೂರು:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿದ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆಗೆ 45 ದಿನಗಳಲ್ಲಿ 1,769 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಭೇಟಿ ವೇಳೆ ಯೋಜನೆ ಕುರಿತು ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ, ಯೋಜನೆಗೆ ಕೇಂದ್ರ ಸರ್ಕಾರದಿಂದ ಇದುವರೆಗೆ 334.73 ಕೋಟಿ ರೂ. ಬಿಡುಗಡೆಯಾಗಿದೆ, ಉಳಿದ 1,769.71 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು ಎಂದರು.
ನಿತಿನ್ ಗಡ್ಕರಿ ಸಕಾರಾತ್ಮಕ ಸ್ಪಂದನೆ
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿತಿನ್ ಗಡ್ಕರಿ ಅವರು, ಮುಂದಿನ 45 ದಿನಗಳಲ್ಲಿ ಯೋಜನೆಯ ಉಳಿದ 1,769.71 ಕೋಟಿ ರೂ. ನೀಡುವ ಭರವಸೆ ನೀಡಿದರು.
ಎಸ್‌ಟಿಆರ್‌ಆರ್ ಯೋಜನೆಯ ಕಾಮಗಾರಿ ರಾಜ್ಯ ಸರ್ಕಾರದ ಶೇ.30 ಹಾಗೂ ಕೇಂದ್ರ ಸರ್ಕಾರದ ಶೇ.70ರ ಪಾಲುದಾರಿಕೆಯ ಸಹಭಾಗಿತ್ವದಲ್ಲಿ 2021ರಲ್ಲಿ ಭೂಸ್ವಾಧೀನದೊಂದಿಗೆ ಆರಂಭವಾಗಿತ್ತು.
ಈ ಯೋಜನೆ ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ, ರಾಮನಗರ, ಆನೇಕಲ್, ಕನಕಪುರ, ಹಾರೋಹಳ್ಳಿ ವ್ಯಾಪ್ತಿ ಒಳಗೊಂಡಿದ್ದು, ಭೂಸ್ವಾಧೀನ ನಂತರವೂ ಪರಿಹಾರ ಧನ ಬಹುತೇಕ ತಲುಪಿರಲಿಲ್ಲ, ಈ ವಿಚಾರವಾಗಿ ಅನೇಕ ಫಲಾನುಭವಿಗಳು ತಮಗೆ ಮನವಿ ನೀಡಿದ್ದರು.
ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿಕೊಂಡಾಕ್ಷಣ ಸಕಾರಾತ್ಮಕವಾಗಿ ಸ್ವಂದಿಸಿದ ಅವರು, 45 ದಿನಗಳೊಳಗೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು ಎಂದರು.