ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹ
ಮೈಸೂರು:ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸುವಂತೆ ಬಿಜೆಪಿ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ಕಿಲೋ ಮೀಟರ್ ರಸ್ತೆಯನ್ನೂ ಅಭಿವೃದ್ಧಿ ಮಾಡಲಾಗದೆ ಭ್ರಷ್ಟಾಚಾರದಲ್ಲಿ ಮುಳುಗಿದೆ.
ರಾಜ್ಯ ಬೊಕ್ಕಸ ಲೂಟಿ
ಸರ್ಕಾರದ ನಾಯಕತ್ವ ವಹಿಸಿರುವ ಉಭಯ ನಾಯಕರು ಬೊಕ್ಕಸವನ್ನು ಲೂಟಿ ಮಾಡುವುದಲ್ಲದೆ, ಪ್ರತಿಪಕ್ಷ ಮುಖಂಡರುಗಳ ಬಗ್ಗೆ ಕೀಳು ಬಾಷೆ ಬಳಸುತ್ತಿದ್ದಾರೆ.
ಈ ರೀತಿ ಮನಬಂದಂತೆ ಮಾತನಾಡುವ ಬದಲು ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ, ನಿಮ್ಮ ಸ್ಥಿತಿ ಏನು ಎಂಬುದನ್ನು ಜನ ನಿರ್ಧರಿಸುತ್ತಾರೆ.
ಮೈಸೂರು ಚಲೋ ಸಮಾರೋಪದಲ್ಲಿ ಮಾತನಾಡಿದ ಅವರು, ಯಾವುದೋ ಕೆಟ್ಟ ಗಳಿಗೆಯಲ್ಲಿ ನೀವು ಅಧಿಕಾರಕ್ಕೆ ಬಂದಿರಿ, ಈಗ ಚುನಾವಣೆ ನಡೆದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ 135 ರಿಂದ 140 ಸ್ಥಾನಗಳನ್ನು ನಿರಾಯಾಸವಾಗಿ ಗೆದ್ದು ಅಧಿಕಾರಕ್ಕೆ ಬರಲಿದೆ.
ಕೇವಲ ಭ್ರಷ್ಟಾಚಾರವೇ ತುಂಬಿದೆ
ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅಭಿವೃದ್ಧಿ ಕಾರ್ಯ ಕಾಣುತ್ತಿಲ್ಲ, ಕೇವಲ ಭ್ರಷ್ಟಾಚಾರವೇ ತುಂಬಿದೆ.
ಉಪಮುಖ್ಯಮಂತ್ರಿ ಶಿವಕುಮಾರ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದು ಮನಬಂದಂತೆ ಮಾತನಾಡುತ್ತಾರೆ, ಕಲ್ಲುಬಂಡೆ ಎಂದು ಹೇಳುತ್ತಾ ಲೂಟಿ ಹೊಡೆಯುತ್ತಿದ್ದಾರೆ.
ನಿಮ್ಮ ಪಾಪದ ಕೊಡ ತುಂಬಿದೆ, ನಿಮ್ಮ ಯುಗ ಯಾವಾಗ ಅಂತ್ಯ ಆಗುತ್ತೆ ಎಂಬುದನ್ನು ಮೊದಲು ನೋಡಿಕೊಳ್ಳಿ, ಬೇರೆಯವರ ಭವಿಷ್ಯದ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ.
ಕುಟುಂಬಕ್ಕೆ 14 ನಿವೇಶನ
ನೀವು ಹೊಣೆ ಹೊತ್ತಿರುವ ನೀರಾವರಿ ಇಲಾಖೆಯಲ್ಲಿ ಒಂದು ನಯಾಪೈಸೆ ಕೆಲಸ ಆಗಿಲ್ಲ, ಇನ್ನು ಸಿದ್ದರಾಮಯ್ಯ ಅವರು, ತಮ್ಮ ಕುಟುಂಬಕ್ಕೆ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ.
ಹಿಂದೆ ಯಾವ ಮುಖ್ಯಮಂತ್ರಿಗಳೂ ಇಂತಹ ಕೆಲಸ ಮಾಡಿಲ್ಲ, ನಿಮ್ಮ ರಾಜಕೀಯ ಬದುಕಿನಲ್ಲಿ ಕಪ್ಪುಚುಕ್ಕೆ ಇಲ್ಲ ಎಂಬುದಾಗಿ ಹೇಳಿಕೊಳ್ಳುತ್ತೀರಿ, ಹಗಲು ದರೋಡೆ ಮಾಡಿ ನಾನು ಶುದ್ಧವಾಗಿದ್ದೇನೆ ಎಂದು ಹೇಳಿಕೊಳ್ಳುತ್ತೀರಿ, ನಿಮಗೆ ನಾಚಿಕೆಯಾಗಬೇಕು.
ನಿಮ್ಮಿಬ್ಬರ ಭ್ರಷ್ಟಾಚಾರವನ್ನು ಕ್ಷಮಿಸಲು ಸಾಧ್ಯವಿಲ್ಲ, ನಿಮ್ಮನ್ನು ವಿಶ್ರಾಂತಿಗೆ ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ ಎಂದರು.