ಬೆಂಗಳೂರು:ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆ ಪರಿಹಾರ ಪ್ರಥಮ ಆದ್ಯತೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಇಂದಿಲ್ಲಿ ತಿಳಿಸಿದ್ದಾರೆ.
ಆನೆ-ಮಾನವ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನರ ಮತ್ತು ವನ್ಯಜೀವಿಗಳ ಸುರಕ್ಷತೆ ಖಾತ್ರಿಪಡಿಸಲು ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಸಮುದಾಯ-ಚಾಲಿತ ಉಪಕ್ರಮ
ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಆನೆಗಳು ನಾಡಿಗೆ ಬರುವುದನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದು, ಈ ಸವಾಲು ಎದುರಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಮಾನವ-ವನ್ಯಜೀವಿ ಸಂಘರ್ಷ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಸಂಕೀರ್ಣ ಸಮಸ್ಯೆಯಾಗಿದೆ.
ಅಮೂಲ್ಯ ಜೀವ ಹಾಗೂ ಬೆಳೆ ಹಾನಿಗೆ ಕಾರಣವಾಗುತ್ತಿರುವ ಸಮಸ್ಯೆಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಲು ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದರು.
ಸಮುದಾಯಗಳ ಮಹತ್ವದ ಪಾತ್ರ
ಜೀವನ ಮತ್ತು ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳು ಅರಣ್ಯ ಸಂರಕ್ಷಣೆಯಲ್ಲಿ ಮಹತ್ವ ಪಾತ್ರ ವಹಿಸಿವೆ, ಕಾಡು ಭೂಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು, ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ.
ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದು, ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ.
ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ, ರಾಜ್ಯದಲ್ಲಿ 563 ಹುಲಿಗಳಿವೆ.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನ ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿರುವುದು ನೋವಿನ ಸಂಗತಿ, ಮಾನವ-ಆನೆಗಳ ಸಂಘರ್ಷ ನಿರ್ವಹಣೆಗೆ ಸೂಕ್ತ ಪರಿಹಾರದ ಅಗತ್ಯವಿದೆ.
ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಆಸಕ್ತಿ ತಳೆದಿದ್ದು, 2023-24ರಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಾ ಅರಣ್ಯ ಇಲಾಖೆಯ ಸುರಕ್ಷತಾ ಕಾರ್ಯಗಳಿಗೆ ಇಲಾಖೆ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ನೀಡಿದ್ದಾರೆ ಎಂದರು.
ಕೇಂದ್ರ ಅರಣ್ಯ ಸಚಿವರಿಗೆ ಮನವಿ
ಇದೇ ಸಂದರ್ಭದಲ್ಲಿ ನಡೆದ ವಿವಿಧ ರಾಜ್ಯಗಳ ಅರಣ್ಯ ಸಚಿವರ ಮಟ್ಟದ ಸಭೆಯಲ್ಲಿ, ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ಯಾಂಪಾ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಹವಾಮಾನ ಬದಲಾವಣೆ, ಪರಿಸರ ಮತ್ತು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲು ಸಲಹೆ ವ್ಯಕ್ತವಾಯಿತು.
ಕೇರಳ ಅರಣ್ಯ ಸಚಿವ ಎ.ಕೆ.ಸಸೀಂದ್ರನ್ ಇದರ ನೇತೃತ್ವ ತಾವು ವಹಿಸುವುದಾಗಿ ಪ್ರಕಟಿಸಿದರು. ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಅರಣ್ಯ ಸಚಿವರನ್ನೂ ಕರೆದುಕೊಂಡು ದೆಹಲಿಗೆ ನಿಯೋಗ ತೆರಳುವ ಮೂಲಕ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ದಿನಾಂಕ ನಿಗದಿ ಮಾಡುವಂತೆ ಈಶ್ವರ ಖಂಡ್ರೆ ತಿಳಿಸಿದ್ದಕ್ಕೆ ಸಭೆ ಸಮ್ಮತಿಸಿತು.