ಬೆಂಗಳೂರು:ದೇಶದ ಸ್ವಾತಂತ್ರ್ಯ ಹೋರಾಟ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಡಿನಾದ್ಯಂತ ಪ್ರತಿಯೊಂದು ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ವಸಂತನಗರ ವಾರ್ಡ್‌ನಲ್ಲಿ ‘ಹರ್ ಘರ್ ತಿರಂಗ’ ಕಾರ್ಯಕ್ರಮಕ್ಕೆ ಚಾಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಆಚರಿಸುತ್ತಿರುವ 78ನೇ ಸ್ವಾತಂತ್ರ್ಯ ಸಂಭ್ರಮವನ್ನು ಅರ್ಥಪೂರ್ಣವಾಗಿಸುವ ದೃಷ್ಟಿಯಿಂದ ಹಾಗೂ ಯುವಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಸುವ ಉದ್ದೇಶದಿಂದ ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತ್ಯಾಗ, ಬಲಿದಾನ ಕುರಿತು ಚರ್ಚೆ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಲಕ್ಷಾಂತರ ಜೀವಗಳ ತ್ಯಾಗ, ಬಲಿದಾನ ಕುರಿತು ಚರ್ಚೆ ಆಗಬೇಕು, ಯುವಜನತೆಯಲ್ಲಿ ದೇಶಭಕ್ತಿ ಜಾಗೃತಿಗೊಳಿಸುವ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿರಂಗಯಾತ್ರೆ ಆಯೋಜಿಸಲಾಗಿದೆ, ಯುವಜನರಿಂದ ಬೈಕ್ ರ‍್ಯಾಲಿ ಮೂಲಕ ತಿರಂಗ ಯಾತ್ರೆ ನಡೆಸಲಾಗುತ್ತಿದೆ.
ಈ ತಿಂಗಳ 15ರವರೆಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಹಾಗೂ ಪುತ್ಥಳಿಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ, ನಾಳೆ (ಆಗಸ್ಟ್ 14) ದೇಶ ವಿಭಜನೆಯ ಕರಾಳ ದಿನದ ನೆನಪಾಗಿ ವಿಭಜನೆ ಸ್ಮೃತಿ ದಿನ ಕಾರ್ಯಕ್ರಮ ನಡೆಯಲಿದೆ ಎಂದರು.