ಬೆಂಗಳೂರು:ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುರಿತು ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಸ್ಪರ್ಧಾಕಾಂಕ್ಷಿ ಎಂಬುದಾಗಿ ಸಿ.ಪಿ.ಯೋಗೇಶ್ವರ್ ಹೇಳಿಕೊಂಡಿರುವುದರಲ್ಲಿ ತಪ್ಪೇನಿಲ್ಲ, ಕ್ಷೇತ್ರದಲ್ಲಿ ಅವರದೇ ಆದ ಹಿಡಿತ, ಬೆಂಬಲ ಇರುತ್ತದೆ, ಕ್ಷೇತ್ರದ ಪ್ರತಿನಿಧಿಯಾಗಿ ಎಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿದ್ದರು, ಆದರೆ, ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗುವ ಸಂದರ್ಭ ಇದಾಗಿದೆ ಎಂದರು.
ಡಾ.ಅಶ್ವತ್ಥನಾರಾಯಣ ಸಮಿತಿ ವರದಿ
ಲೋಕಸಭಾ ಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಒಟ್ಟಾಗಿ ಎದುರಿಸಿದ್ದೇವೆ, ವಿಧಾನಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿ ಅಭಿಪ್ರಾಯ ಪಡೆಯಲಾಗಿದೆ, ಡಾ.ಅಶ್ವತ್ಥನಾರಾಯಣ ಸಮಿತಿ ವರದಿ ಬಗ್ಗೆ ಮಾಹಿತಿ ಇಲ್ಲ, ಅವರೊಂದಿಗೆ ಚರ್ಚಿಸಿದ ನಂತರ ವಿಷಯವನ್ನು ದೆಹಲಿ ವರಿಷ್ಠರ ಗಮನಕ್ಕೆ ತರುತ್ತೇನೆ, ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನನ್ನ ಆದ್ಯ ಕರ್ತವ್ಯ ಎಂದರು.
ಪಕ್ಷಕ್ಕೆ ಶಕ್ತಿ ತರುವುದಾದರೆ ಬಳ್ಳಾರಿ ಪಾದಯಾತ್ರೆಗೆ ವರಿಷ್ಠರು ಸಮ್ಮತಿ ಕೊಡುತ್ತಾರೆ, ಈ ವಿಚಾರದಲ್ಲಿ ಯಾವುದೇ ತಕರಾರಿಲ್ಲ.
ರಾಜ್ಯ ಸರ್ಕಾರದ ನಿರ್ಲಕ್ಷ್ಯ
ಉತ್ತಮ ಮುಂಗಾರಿನಿಂದ ರಾಜ್ಯದ ಬಹುತೇಕ ಅಣೆಕಟ್ಟೆಗಳು ಭರ್ತಿಯಾಗಿ ರೈತರು ಸಂತಸ ಹೊಂದಿದ್ದರು, ತುಂಗಭದ್ರಾ ಅಣೆಕಟ್ಟೆಗೆ ಮುಖ್ಯ ಎಂಜಿನಿಯರ್ ನೇಮಕ ಆಗಿಲ್ಲ, ಜಲಾಶಯದ ಕ್ರೆಸ್ಟ್‌ಗೇಟ್ ಮುರಿದ ಘಟನೆಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದರು.
ಜಲಾಶಯದಿಂದ ಪ್ರತಿದಿನ 98 ಸಾವಿರ ಕ್ಯೂಸೆಕ್ ನೀರು ಪೋಲಾಗುತ್ತಿದೆ, ಅನಿವಾರ್ಯವಾಗಿ ಅಪಾರ ಪ್ರಮಾಣದ ನೀರು ಡ್ಯಾಂನಿಂದ ಹೊರಕ್ಕೆ ಬಿಡಬೇಕಿದೆ, ಇದರಿಂದ ಅಣೆಕಟ್ಟೆ ನೀರು ಅವಲಂಬಿಸಿರುವ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಭತ್ತ ಬೆಳೆಯುವ ಪ್ರದೇಶ ಇದಾಗಿದ್ದು, ಅಣೆಕಟ್ಟೆ ಕ್ರೆಸ್ಟ್‌ಗೇಟ್ ಮುರಿದಿರುವುದರಿಂದ ಒಂದು ಬೆಳೆ ತೆಗೆಯಲೂ ಸಾಧ್ಯವಾಗದೆ, ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.