ದೊಡ್ಡ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ
ಬೆಂಗಳೂರು : ಬಡತನದ ರೇಖೆಗಿಂತ ಕೆಳಗಿನ ಕಡುಬಡವರಿಗಷ್ಟೇ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಪರಿಷ್ಕರಿಸಲು ನಿರ್ಧರಿಸಿದೆ.
ಬರುವ 22 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ, ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಂದ ಬಿಡಿಸಲು ಮತ್ತು ಬಡವರಿಗಷ್ಟೇ ಇದರ ಸವಲತ್ತು ಕಲ್ಪಿಸುವ ಉದ್ದೇಶದಿಂದ ರೂಪುರೇಷ ಸಿದ್ದಪಡಿಸಲು ಸಮಿತಿ ರಚನೆಗೆ ಮುಂದಾಗಿದೆ.
ಉಳ್ಳವರಿಗೂ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 60 ಸಾವಿರ ಕೋಟಿ ರೂ. ಹೊರೆ ಬೀಳುತ್ತದೆ.
ಯೋಜನೆಯನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಅದರಲ್ಲೂ ಕಡುಬಡವರಿಗಷ್ಟೇ ಸೀಮಿತಗೊಳಿಸಲು ಪಡಿತರ ಚೀಟಿ ಪರಿಷ್ಕರಿಸಲು ನಿರ್ಧರಿಸಿದೆ.
ಕಳೆದ ಜೂನ್ 20, 2023ರ ಅಂತ್ಯಕ್ಕೆ ರಾಜ್ಯದಲ್ಲಿ 1.13 ಕೋಟಿ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿವೆ. ಅಂದರೆ ರಾಜ್ಯದ ಶೇ. 85.23 ಕುಟುಂಬಗಳಿಗೆ ಈ ಸವಲತ್ತು ದೊರೆಯುತ್ತಿದೆ.
ಬಿಪಿಎಲ್ ಮಾನದಂಡ ಆಧಾರದ ಮೇಲೆ ಶೇ.15 ರಷ್ಟು ಕುಟುಂಬಗಳು ಮಾತ್ರ ಬಡತನರೇಖೆಗಿಂತ ಮೇಲಿನ ಕುಟುಂಬಗಳಾಗಿವೆ.
ಬಲಾಢ್ಯರು ಮತ್ತು ಪ್ರಭಾವಿಗಳು ಉಳ್ಳವರು ಬಿಪಿಎಲ್ ಚೀಟಿ ಪಡೆದು, ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಇಂತಹವರಿಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ.
ರಾಷ್ಟ್ರೀಯ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಕಡುಬಡವರಿಗೆ ಮಾತ್ರ ಅಂದರೆ ಶೇ. 60 ರಷ್ಟು ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡುವ ತೀರ್ಮಾನಕ್ಕೆ ಬಂದಿದೆ.
ಗೃಹ ಜ್ಯೋತಿ, ಶಕ್ತಿ, ಯುವನಿಧಿ, ಅನ್ನಭಾಗ್ಯ, ಹಾಗೂ ಗೃಹಲಕ್ಷ್ಮೀ ಯೋಜನೆಗಳು ಕಡುಬಡವರಿಗಲ್ಲದೆ, ಉಳ್ಳವರಿಗೂ ದೊರೆಯುತ್ತಿವೆ.
ಅದರಲ್ಲೂ ಗೃಹ ಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಸರ್ಕಾರಿ ನೌಕರರೂ ಸೇರಿದಂತೆ ಎಲ್ಲಾ ವರ್ಗದವರು ಈ ಸವಲತ್ತು ಪಡೆಯುತ್ತಿದ್ದಾರೆ.
ಉಳ್ಳವರಿಗೆ ಸವಲತ್ತು ಕಲ್ಪಿಸುವ ಬದಲು ಅರ್ಹ ಕಡುಬಡವರಿಗಷ್ಟೇ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವಂತೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಯೋಜನೆ ಪರಿಷ್ಕೃತಗೊಂಡರೆ ಸುಮಾರು ವಾರ್ಷಿಕ 35 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ. ಈ ಬಾಬ್ತನ್ನು ಅನ್ಯ ಯೋಜನೆಗಳಿಗೆ ಬಳಸಿಕೊಳ್ಳಬಹುದು ಎಂದು ಸಚಿವರುಗಳು ಮುಖ್ಯಮಂತ್ರಿಯವರಿಗೆ ತಿಳಿ ಹೇಳಿದ್ದಾರೆ.
ಯೋಜನೆಗಳನ್ನು ಕಡಿತಗೊಳಿಸಲು ಕಾಂಗ್ರೆಸ್ ವರಿಷ್ಠರು ಅನುಮತಿ ನೀಡುತ್ತಿಲ್ಲ. ಇದರ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿಯವರ ಆಪ್ತ ಬಳಗದ ಸಚಿವರುಗಳು ಕಳೆದ ಮಂಗಳವಾರ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ, ಉಳ್ಳವರಿಗ್ಯಾತಕ್ಕೆ ಗ್ಯಾರಂಟಿಗಳನ್ನು ನೀಡಬೇಕು.
ಅದರ ಬದಲು ಕಡುಬಡವರಿಗೆ ನೀಡಿ, ಉಳಿದ ಹಣವನ್ನು ಅಭಿವೃದ್ಧಿಗೆ ಬಳಸಿಕೊಳ್ಳೋಣ ಎಂದು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿರುವುದಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಯೋಜನೆ ನಮಗೆ ಸಂಪೂರ್ಣವಾಗಿ ಕೈಹಿಡಿದಿಲ್ಲ ಎಂಬ ಮಾಹಿತಿಯನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ.
ಸಚಿವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಯವರು ಮುಂದಿನ ಸಂಪುಟ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಂಡು ಒಂದು ಮಾರ್ಗಸೂಚಿ ರಚನೆಗೆ ಸಮಿತಿ ರಚಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.