ಬೆಂಗಳೂರು:ರಾಜೀವಗಾಂಧಿ ಹಾಗೂ ಡಿ.ದೇವರಾಜ ಅರಸರ ಬದುಕು ಮತ್ತು ಕಾರ್ಯ ನಮಗೆಲ್ಲ ಮಾರ್ಗದರ್ಶಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸದ್ಭಾವನಾ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಚಿಕ್ಕ ವಯಸ್ಸಿನಲ್ಲೇ ದೇಶದ ಪ್ರಧಾನಿಯಾಗಿದ್ದರು, ಆಧುನಿಕ ಭಾರತದ ಕನಸು ಕಂಡಿದ್ದರು, ಯುವಜನತೆಯ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡಿದ್ದರು, ಅದಕ್ಕಾಗಿ ಮತದಾನದ ವಯಸ್ಸು 21 ರಿಂದ 18ಕ್ಕೆ ಇಳಿಸಿದರು.
ಭಾರತೀಯರು ಒಗ್ಗಟ್ಟಾಗಿರಬೇಕು
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಕಾರಣಕರ್ತರಾದರು, ಸಾಮಾಜಿಕ ನ್ಯಾಯದ ಪರ ಇದ್ದರು, ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆಂದು ಹಂಬಲಿಸಿದವರು, ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಭೇದ ಮರೆತು, ಎಲ್ಲೇ ಇದ್ದರೂ ಭಾರತೀಯರು ಒಗ್ಗಟ್ಟಾಗಿರಬೇಕು ಎಂಬ ಕನಸು ಕಂಡಿದ್ದರು.
ರಾಜಕೀಯ ಕ್ಷೇತ್ರದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಪಾಲು ಸಿಕ್ಕಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂಬ ನಂಬಿಕೆಯಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತಂದರು.
ಭಾರತೀಯ ಜನತಾ ಪಕ್ಷ ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಪರ ಎಂಬುದಾಗಿ ಎಷ್ಟೇ ಸಮರ್ಥಿಸಿಕೊಂಡರೂ, ನಂಬಲು ಸಾಧ್ಯವೇ ಇಲ್ಲ, ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಬರಬಾರದೆಂದು ಬಯಸುತ್ತಾರೆ.
ಹಿಂದುಳಿದವರಿಗೆ ಮೀಸಲಾತಿ
ದೇವರಾಜ ಅರಸು ಅವರು 1972ರಿಂದ ದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು, ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ, ಹಾವನೂರ ಆಯೋಗ ರಚನೆ ಮಾಡಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ತಂದರು.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ರಾಜಕೀಯವಾಗಿ ಗುರುತಿಸಿ, ಚುನಾವಣೆಯಲ್ಲಿ ಗೆದ್ದು ವಿಧಾನಸೌಧದ ಮೆಟ್ಟಿಲು ಹತ್ತಲು ಅವಕಾಶ ಮಾಡಿಕೊಟ್ಟರು.
ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧ, ಸಾಲ ಮನ್ನಾದಂತಹ ಅನೇಕ ಪ್ರಗತಿಪರ ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತಂದರು.
ಅಸಮಾನತೆ ಹೋಗಲಾಡಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದೇನೆಂಬ ಕಾರಣಕ್ಕೆ ಬಿಜೆಪಿ ನನ್ನನ್ನು ಸಹಿಸುತ್ತಿಲ್ಲ, ಗ್ಯಾರಂಟಿಗಳ ಜಾರಿಯಿಂದ ಹೊಟ್ಟೆ ಉರಿದುಕೊಂಡು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.