ಬೆಂಗಳೂರು:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಸಚಿವರು, ಮುಖಂಡರೇ ತೆರೆಮರೆಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣದ ತನಿಖೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆದೇಶ ನೀಡುತ್ತಿದ್ದಂತೆ ಈ ಕಸರತ್ತು ಆರಂಭವಾಗಿದೆ.
ಯಡಿಯೂರಪ್ಪ ಅವರ ರೀತಿಯಲ್ಲೇ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾದರೆ ಅಂತಹ ಸನ್ನಿವೇಶದಲ್ಲಿ ಆ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಭಾವೀ ಸಚಿವರು ಹಾಗೂ ಹಿರಿಯ ಶಾಸಕರು ಹೈಕಮಾಂಡ್ ಕದ ತಟ್ಟಿದ್ದಾರೆ.
ನನಗೇ ಮುಖ್ಯಮಂತ್ರಿ ಸ್ಥಾನ
ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ ನನಗೇ ಆ ಸ್ಥಾನ ದೊರೆಯುವುದೆಂಬ ತುಂಬು ಆತ್ಮವಿಶ್ವಾಸದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ.
ಶಿವಕುಮಾರ್ ಜೊತೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್, ಪಕ್ಷದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಮುಂಚೂಣಿಯಲ್ಲಿದ್ದಾರೆ.
ಸತೀಶ್ ಜಾರಕಿಹೊಳಿ ತಮಗೆ ದಕ್ಕುವ ಅಧಿಕಾರಕ್ಕೆ ಅಡ್ಡಗಾಲು ಆಗಬಹುದೆಂದು ಊಹಿಸಿರುವ ಶಿವಕುಮಾರ್, ನಿನ್ನೆ ತಮ್ಮ ನಿವಾಸಕ್ಕೆ ಸತೀಶ್ ಅವರನ್ನು ಕರೆಸಿಕೊಂಡು ಸುಮಾರು 90 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.
ಕಾನೂನಿನ ಕುಣಿಕೆಯಲ್ಲಿ ಸಿದ್ದರಾಮಯ್ಯ
ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಅಧಿಕಾರ ತ್ಯಾಗ ಮಾಡುವ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಎದುರಾದರೆ, ನನ್ನನ್ನು ಬೆಂಬಲಿಸಿ, ಮುಂದೆ ನಿಮಗೆ ಪಕ್ಷದಲ್ಲಿ ಒಳ್ಳೆಯ ಅವಕಾಶಗಳಿವೆ, ದುಡುಕಿ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಶಿವಕುಮಾರ್ ಸಲಹೆ ಮಾಡಿದ್ದಾರಂತೆ.
ಜಾರಕಿಹೊಳಿ ಮತ್ತು ಅವರ ಸಹೋದರರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್, ಪಕ್ಷ ಮತ್ತು ಸರ್ಕಾರ ಉಳಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ.
ಅಧಿಕಾರ ಹಂಚಿಕೆ ಪರಿಸ್ಥಿತಿ ಎದುರಾದರೆ ಅಂತಹ ಸನ್ನವೇಶದಲ್ಲಿ ಡಾ.ಪರಮೇಶ್ವರ್ ಇಲ್ಲವೇ ಜಾರಕಿಹೊಳಿ ಮುಖ್ಯಮಂತ್ರಿ ಎಂದು ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಕೆಲವು ಮಂತ್ರಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಪರಿಶಿಷ್ಟ ವ್ಯಕ್ತಿ ಮುಖ್ಯಮಂತ್ರಿ
ಶಿವಕುಮಾರ್ ಅವರನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ, ನಮಗೆ ಸಿದ್ದರಾಮಯ್ಯ ಅವರೇ ನಾಯಕರು, ಅವರು ಪೂರ್ಣಾವಧಿ ಅಧಿಕಾರದಲ್ಲಿ ಇರುತ್ತಾರೆ, ಒಂದು ವೇಳೆ ಪರಿಸ್ಥಿತಿ ಬದಲಾದರೆ, ಅಂತಹ ಸಂದರ್ಭದಲ್ಲಿ ಪರಿಶಿಷ್ಟ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಆ ಸಮುದಾಯಕ್ಕೆ ಸೇರಿದ ನಾಯಕರುಗಳ ಸಭೆ ಸರಣಿಯಲ್ಲಿ ನಡೆಯಿತು.
ಈ ಹಿನ್ನೆಲೆಯಲ್ಲಿ ಡಾ.ಪರಮೇಶ್ವರ್, ಜಾರಕಿಹೊಳಿ ಪಕ್ಷದ ವರಿಷ್ಠರನ್ನು ಸಂಪರ್ಕಿಸಿ ಸರ್ಕಾರದಲ್ಲಿ ಪರಿಸ್ಥಿತಿಗಳು ಏರುಪೇರಾದರೆ ನಮಗೆ ಅವಕಾಶ ನೀಡಿ ಎಂದು ಕೋರಿದ್ದಾರೆ.
ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ದೇಶಪಾಂಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ನೀವು ರಾಜ್ಯ ರಾಜಕಾರಣಕ್ಕೆ ಬರುತ್ತೀರಾ, ಬರುವುದಾದರೆ, ನಾವು ನಿಮ್ಮ ಹಿಂದೆ ಇರುತ್ತೇವೆ.
ಒಳ್ಳೆಯ ಸರ್ಕಾರ ಕೊಡುತ್ತೇನೆ
ನೀವು ಬರದಿದ್ದರೆ, ನನಗೆ ಮುಖ್ಯಮಂತ್ರಿ ಆಗುವ ಅವಕಾಶ ಮಾಡಿಕೊಡಿ, ನಿಮ್ಮ ನೆರಳಿನಲ್ಲಿ ಒಳ್ಳೆಯ ಸರ್ಕಾರ ಕೊಡುತ್ತೇನೆ ಎಂದು ನೇರವಾಗಿ ಕೇಳಿದ್ದಾರಂತೆ.
ಮತ್ತೊಬ್ಬ ಹಿರಿಯ ಸದಸ್ಯ ಟಿ.ಬಿ.ಜಯಚಂದ್ರ ಅವರು ಖರ್ಗೆ ಅವರನ್ನ ಭೇಟಿ ಮಾಡಿ ನೀವೇ ಮತ್ತೆ ರಾಜ್ಯ ರಾಜಕಾರಣಕ್ಕೆ ಬನ್ನಿ ಮುಖ್ಯಮಂತ್ರಿಯಾಗಿ, ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಇನ್ನು ಮುಂದಾದರೂ ಅಧಿಕಾರ ಸಿಗಲಿ ಎಂದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಎಲ್ಲಾ ವಿಚಾರವೂ ತಿಳಿದಿದೆ, ಆದರೆ, ಕಾನೂನಿನ ಹೋರಾಟ ಮಾಡಿ ಅಧಿಕಾರ ಉಳಿಸಿಕೊಳ್ಳಲು ಸುಪ್ರೀಂಕೋರ್ಟ್‌ನ ಹಿರಿಯ ವಕೀಲರ ಮೊರೆ ಹೋಗಿದ್ದಾರೆ.
ಕೆ.ಜೆ.ಜಾರ್ಜ್ ಹೆಸರು
ಒಂದು ವೇಳೆ ಅಧಿಕಾರದಿಂದ ಇಳಿಯಲೇಬೇಕಾದ ಪರಿಸ್ಥಿತಿ ಎದುರಾದರೆ, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ತಮ್ಮ ಸ್ಥಾನಕ್ಕೆ ತರುವ ಚಿಂತನೆಯಲಿದ್ದಾರೆ.
ತೆರೆಮರೆಯ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ಕಾಲ ಸನ್ನಿಹಿತವಾದಂತೆ ಭಾಸವಾಗುತ್ತಿದೆ.