ಅಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ಹೆದರಿದ್ದಾರೆ
ಬೆಂಗಳೂರು: ಜಂತಕಲ್ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸುವ ಅಗತ್ಯಬಿದ್ದರೆ, ಮುಲಾಜಿಲ್ಲದೆ, ಬಂಧನಕ್ಕೊಳಪಡುಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರನ್ನು ಬಂಧಿಸುವ ಪರಿಸ್ಥಿತಿ ಎದುರಾಗಿಲ್ಲ. ಅಗತ್ಯ ಬಿದ್ದರೆ, ಅದರಲ್ಲಿ ಮುಲಾಜ ನೋಡುವುದಿಲ್ಲ ಎಂದರು.
ಅಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ಈಗಾಗಲೇ ಹೆದರಿದ್ದಾರೆ. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರಲ್ಲಿ ಕಾಡುತ್ತಿದೆ.
ಲೋಕಾಯುಕ್ತ ಮತ್ತು ಎಸ್‌ಐಟಿ ತನಿಖಾ ವರದಿ ನೀಡಿ, ರಾಜ್ಯಪಾಲರನ್ನು ಅನುಮತಿ ಕೋರಿದ್ದರೂ, ಇದುವರೆಗೂ ಅವರು ಅನುಮತಿ ನೀಡಿಲ್ಲ.
ನನ್ನ ವಿಚಾರದಲ್ಲಿ ತಕ್ಷಣ ಕ್ರಮಕೈಗೊಳ್ಳುತ್ತಾರೆ. ಕುಮಾರಸ್ವಾಮಿ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಇದನ್ನು ತಾರತಮ್ಯ ಎನ್ನದೇ ಏನನ್ನಬೇಕು ಎಂದು ಪ್ರಶ್ನಿಸಿದರು.
ಮುಡಾ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಕುಮಾರಸ್ವಾಮಿ ಇಂದು ನನ್ನ ಬಗ್ಗೆ ಮಾತನಾಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಎಲ್ಲಾ ಆರೋಪಗಳು ಹಿಟ್ ಅಂಡ್ ರನ್‌ನಂತೆ ಇರುತ್ತವೆ.
ಜೇಬಿನಲ್ಲಿ ಫೆನ್‌ಡ್ರೈವ್ ಇದೆ ಎನ್ನುತ್ತಾರೆ. ಲಕೋಟೆಯಲ್ಲಿ ದಾಖಲೆ ಇದೆ ಎಂದು ಹೆದರಿಸುತ್ತಾರೆ. ಇಂತಹದ್ದಕ್ಕೆಲ್ಲ ನಾನು ಬೆಲೆ ಕೊಡುವವನಲ್ಲ ಎಂದರು.
ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಮಾಡದೇ, ರಾಜ್ಯದ ಜನರ ಅಭಿವೃದ್ಧಿ ಪರವಾಗಿಯೇ ನಮ್ಮ ನಿರ್ಣಯಗಳಿರುತ್ತವೆ ಎಂದರು.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿ, ಹೆಸರುಕಾಳು ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ “ಬಿಜೆಪಿಯಲ್ಲಿ ಆಂತರಿಕ ಸಮಸ್ಯೆಯಿದೆ. ಅದನ್ನು ಸರಿ ಮಾಡಿಕೊಳ್ಳಲು ಈಗ ಮತ್ತೊಮ್ಮೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ” ಎಂದು ವ್ಯಂಗ್ಯವಾಡಿದರು.
“ಮುಡಾ ಅಕ್ರಮ ಎಂದು ಮೈಸೂರು ಚಲೋ ಮಾಡಿದರು. ಅದಕ್ಕೆ ಈಗಾಗಲೇ ನಾವು ಉತ್ತರ ಕೊಟ್ಟಿದ್ದೇವೆ. ಈಗ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಆಗುತ್ತದೆಯೇ? ಬೇಡ ಎಂದು ಹೇಳಿದವರು ಯಾರು?” ಎಂದು ಕುಟುಕಿದರು.
“ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್ ಅವಘಡ ವಿಚಾರವಾಗಿ ವಿರೊಧ ಪಕ್ಷಗಳು ಕೇವಲ ಟೀಕೆ ಮತ್ತು ರಾಜಕೀಯ ಮಾಡುತ್ತಿದ್ದವು. ಆದರೆ ನಮ್ಮ ಕೆಲಸಗಳು ಉಳಿದುಕೊಂಡಿತು, ಅವರ ಟೀಕೆಗಳು ಸತ್ತು ಹೋದವು” ಎಂದರು.
“ನಮ್ಮ ತಂತ್ರಜ್ಞರು, ಅಧಿಕಾರಿಗಳು, ಇಂಜಿನಿಯರ್ ಗಳು, ಕಾರ್ಮಿಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಈ ಭಾಗದ ಶಾಸಕರು ಅವಘಡ ನಡೆದ ದಿನದಿಂದ ಒಂದು ರಾತ್ರಿಯೂ ನಿದ್ದೆ ಮಾಡದೆ ಕೆಲಸ ಮಾಡಿದ್ದಾರೆ. ದೇವರ, ಜನರ ಆಶೀರ್ವಾದದಿಂದ ಈ ಕೆಲಸ ನಡೆದಿದೆ. ನಮ್ಮ ರೈತರನ್ನು ನಾವು ಬದುಕಿಸಿದ್ದೇವೆ” ಎಂದರು.
ತುಂಗಭದ್ರಾ ಅಣೆಕಟ್ಟು ಕಟ್ಟುವಾಗಲೇ ಪ್ರತಿವರ್ಷ ಅರ್ಧ ಟಿಎಂಸಿಯಷ್ಟು ಹೂಳು ತುಂಬಿಕೊಳ್ಳುತ್ತದೆ ಎನ್ನುವ ವರದಿಯಿತ್ತು ಎಂದು ಎಂ.ಬಿ.ಪಾಟೀಲರು ಮೊದಲೇ ಹೇಳಿದ್ದರು. ಮುಂದಿನ ದಿನಗಳಲ್ಲಿ ಪ್ರವಾಸ ನಡೆಸಿ ನವಲಿ ಸಮತೋಲಿತ ಅಣೆಕಟ್ಟಿನ ವಿಚಾರವಾಗಿ ಕೆಲಸ ಮಾಡಲಾಗುವುದು. ಇದರ ಪ್ರಸ್ತಾಪವನ್ನು ಈಗಾಗಲೇ ಬಜೆಟ್ ಅಲ್ಲಿ ಸೇರಿಸಲಾಗಿದೆ” ಎಂದು ತಿಳಿಸಿದರು.
“ನಾನು ತಂತ್ರಜ್ಞನಲ್ಲ. ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಎಂದು ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವೆ. ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ. ಅವರು ಎಲ್ಲಾ ಅಣೆಕಟ್ಟುಗಳ ಸುರಕ್ಷಾತ ವರದಿಯನ್ನು ನೀಡಲಿದ್ದಾರೆ. ಅವರ ವರದಿಯ ಮೇಲೆ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಆ ಕೆಲಸಗಳನ್ನು ಸರ್ಕಾರ ಮಾಡಲಿದೆ”ಎಂದು ತಿಳಿಸಿದರು.
“ತುಂಗಭದ್ರಾ ಅಣೆಕಟ್ಟಿನ ಗೇಟ್ ಅನ್ನು ಕಾರ್ಮಿಕರ, ಇಂಜಿನಿಯರ್ ಗಳ, ಅಧಿಕಾರಿಗಳ ಶ್ರಮದಿಂದ ದುರಸ್ತಿ ಮಾಡಲಾಗಿದೆ. ಅಣೆಕಟ್ಟು ತುಂಬಿದ ತಕ್ಷಣ ನಾನು ಮತ್ತು “ನಾರಾಯಣ ಎಂಜಿನಿಯರಿಂಗ್, ಜಿಂದಾಲ್ ಮತ್ತು ಹಿಂದೂಸ್ಥಾನ್ ಇಂಜಿನಿಯರಿಂಗ್ ಈ ಮೂರು ಕಂಪೆನಿಗಳು ಮಾಡಿದ ಸಹಾಯದಿಂದ ಕೇವಲ ನಾಲ್ಕು ದಿನಗಳಲ್ಲಿ ಗೇಟ್ ದುರಸ್ತಿ ಮಾಡಲಾಯಿತು. ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ಕಾರ್ಮಿಕರನ್ನು ಗೌರವಿಸುವ ಕೆಲಸ ಸರ್ಕಾರ ಮಾಡಲಿದೆ. ಇಡೀ ದೇಶವೇ ಏನಾಗಬಹುದು ಎಂದು ಈ ಕೆಲಸವನ್ನು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ” ಎಂದು ಹೇಳಿದರು.