ಬೆಂಗಳೂರು:ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವವರೆಗೂ ವಿಶ್ರಮಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಘೋಷಿಸಿದೆ.
ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು.
ಇದರ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖಂಡರು, ನಮ್ಮ ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಪಥ ಮಾಡಿದರು.
ಮನೆಗೆ ಕಳಿಸುವವರೆಗೆ ವಿರಮಿಸುವುದಿಲ್ಲ
ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಾವು ವಿರಮಿಸುವುದಿಲ್ಲ, ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ.
ಸರ್ಕಾರಿ ಜಮೀನನ್ನು ನೀವು ಖರೀದಿಸಿದ್ದೀರಲ್ಲವೇ, ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿದರು.
ಹುಲಿಯಾ ಎಂದಾಗ ಖುಷಿ ಪಡುತ್ತಿದ್ದ ನೀವೀಗ ಕರಿಯಾ ಆಗಿ ಕೂತಿದ್ದೀರಲ್ಲಾ ಎಂದು ಕೇಳಿದರು.
ಕಾಂಗ್ರೆಸ್‌ನಿಂದ ದಲಿತರ ಸಮಾಧಿ
ಇಡೀ ರಾಜ್ಯ ಸಿದ್ದರಾಮಯ್ಯನವರ ವಿರುದ್ಧ ಇದೆ, ದಲಿತರಿಗೆ ಮೀಸಲಿಟ್ಟ ಹಣ ವರ್ಗಾವಣೆ ಪ್ರಕರಣ, ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಎಲ್ಲವೂ ದಲಿತ ಸಮುದಾಯಕ್ಕೆ ಸೇರಿದ ವಿಚಾರಗಳು, ಕಾಂಗ್ರೆಸ್ ಪಕ್ಷ ದಲಿತರ ಸಮಾಧಿ ಮಾಡುತ್ತಿದ್ದರೆ ಸ್ವಾಮೀಜಿಗಳು ಆ ಸಮಾಧಿ ಮೇಲೆ ಕುಳಿತು ಅವರಿಗೆ ಬೆಂಬಲ ಕೊಡುವುದು ಸರಿಯೇ ಎಂದು ಕೇಳಿದರು.
ಜನಹಿತ, ರಾಜ್ಯ ಹಿತದ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಭ್ರಷ್ಟ ಸರ್ಕಾರದ ವಿರುದ್ಧ ನಾವು ಜನಜಾಗೃತಿ ಮೂಡಿಸಬೇಕು, ಪ್ರತಿನಿತ್ಯ ಹೋರಾಟ ಮಾಡುವುದೇ ನಮ್ಮ ಕರ್ತವ್ಯವಾಗಿದೆ ಎಂದು ನಾಯಕರು ವಿಶ್ಲೇಷಿಸಿದರು.
ಲೂಟಿ ಕಾಂಗ್ರೆಸ್ ನೀತಿ
ಲೂಟಿ ಹೊಡೆಯುವುದೇ ಕಾಂಗ್ರೆಸ್ ಸರ್ಕಾರದ ನೀತಿಯಾಗಿದೆ, ಸಾಕ್ಷಿ ಸಮೇತ ಹಿಡಿದರೂ ಇವರು ರಾಜೀನಾಮೆ ಕೊಡುವುದಿಲ್ಲ, ಜನರ ಭಾವನೆಯನ್ನು ಇವರು ಗೌರವಿಸುವುದಿಲ್ಲ, ಕುರ್ಚಿಗೆ ಅಂಟಿಕೊಂಡೇ ಇರುವ ಭಂಡತನ ಇವರದು ಎಂದು ಟೀಕಿಸಿದರು.
ಇವರು ಸಂವಿಧಾನ ಕೈಯಲ್ಲಿ ಹಿಡಿದು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ, ಆದರೆ, ತಮ್ಮ ಕರ್ತವ್ಯ, ಜವಾಬ್ದಾರಿಗಳ ಕುರಿತು ಮಾತನಾಡುವುದಿಲ್ಲ, ಸಂವಿಧಾನದ ಆಶಯಗಳನ್ನು ಗೌರವಿಸುವುದಿಲ್ಲ.
ಇವರಿಗೆ ಮದ ಬಂದಿದೆ, ದುರಹಂಕಾರ ಹೆಚ್ಚಾಗಿದೆ, ಬಾಂಗ್ಲಾದೇಶದ ಪರಿಸ್ಥಿತಿ ನಿರ್ಮಿಸುವುದಾಗಿ ಹೇಳುತ್ತಾರೆ, ನಾಲಾಯಕ್ ಗವರ್ನರ್ ಎನ್ನುತ್ತಾರೆ, ರಾಜಭವನಕ್ಕೆ ನುಗ್ಗಿ ಹಲ್ಲೆ ಮಾಡುವುದಾಗಿ ಹೇಳುತ್ತಾರೆ ಎಂದು ಖಂಡಿಸಿದರು.
ತಾಕತ್ತಿದ್ದರೆ ಸಿಬಿಐ ತನಿಖೆಗೆ ನೀಡಿ
ಸಿದ್ದರಾಮಯ್ಯನವರಿಗೆ ಧಮ್ಮಿದ್ದರೆ, ತಾಕತ್ತಿದ್ದರೆ ಹಗರಣಗಳ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಇನ್ನು ಕೆಲವು ಮುಖಂಡರು ಒತ್ತಾಯಿಸಿದರು.
ವೈಟ್ನರ್ ಹಚ್ಚಿದ್ದು ತಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳಬೇಕು ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ವಿಜಯನಗರದ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೊಡಿ ಎಂದು ಅರ್ಜಿಯಲ್ಲಿ ಬರೆದದ್ದ ಪದಗಳಿಗೆ ವೈಟ್ನರ್ (ಬಿಳಿ ಬಣ್ಣ) ಹಚ್ಚಿದ್ದಾರೆ, ಸಿದ್ದರಾಮಯ್ಯ ಸುಳ್ಳು ರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದರು.