ಸಚಿವ ಪಾಟೀಲ್ ಅಧ್ಯಕ್ಷತೆ ಸಭೆಯಲ್ಲಿ ಜಾಗ ಮಂಜೂರು
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಡಿ 14 ಬಿಡಿ ನಿವೇಶನ ಪಡೆದ ಪ್ರಕರಣದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಎಂ. ಖರ್ಗೆ ಅವರಿಗೆ ಕೈಗಾರಿಕಾ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ಸ್ಥಳದಲ್ಲಿ ಐದು ಎಕರೆ ಜಮೀನನ್ನು ಸರ್ಕಾರ ನೀಡಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಹಂಚಿಕೆಯಾಗಿರುವ ವಿಸ್ತೀರ್ಣದಲ್ಲಿ ರಾಹುಲ್ ಖರ್ಗೆ ಟ್ರಸ್ಟಿ ಆಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಈ ಜಮೀನು ಪಡೆದಿದ್ದಾರೆ.
ಪರಿಶಿಷ್ಟ ಜಾತಿ ಕೋಟದಡಿ ಜಾಗ
ಪರಿಶಿಷ್ಟ ಜಾತಿ ಕೋಟದಡಿಯಲ್ಲೇ ಐದು ಎಕರೆ ವಿಸ್ತೀರ್ಣ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ.
ಈ ಟ್ರಸ್ಟ್ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಸಂಸ್ಥೆಗಳ ಸ್ಥಾಪನೆಗಾಗಿ ಜಾಗ ಮಂಜೂರು ಮಾಡುವಂತೆ ಕೋರಿತ್ತು.
ಅವರ ಅರ್ಜಿ ಮೇರೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಸ್ಥಳ ಮಂಜೂರು ಮಾಡಲಾಗಿದೆ.
ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿಎ ನಿವೇಶನ
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಎಂ.ಬಿ.ಪಾಟೀಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿಎ ನಿವೇಶನವನ್ನು ಕಾನೂನು ಪ್ರಕಾರವೇ ನಿಗದಿತ ಬೆಲೆಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ನೀಡಿರುವ ಜಾಗದಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದ್ದು, ಬಿಜೆಪಿ ನಾಯಕ ಲೆಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ.
ರಾಹುಲ್ ಖರ್ಗೆ ಐಐಟಿ ಪದವೀಧರರಾಗಿದ್ದು, ಅವರ ಕುಟುಂಬ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ, ಕೆಐಎಡಿಬಿ ನಿಯಮಗಳ ಪ್ರಕಾರ ಸಿಎ ನಿವೇಶನಗಳಲ್ಲಿ ಆರ್ ಅಂಡ್ ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕ್, ಆಸ್ಪತ್ರೆ, ಹೋಟೆಲ್, ಪೆಟ್ರೋಲ್‌ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ.
ಆಸಕ್ತರು ಯಾರು ಬೇಕಾದರೂ ಇದಕ್ಕೆ ಪ್ರಯತ್ನಿಸಬಹುದು, ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಶಿಫಾರಸಿನ ನಂತರವೇ ನಿವೇಶನಗಳ ಹಂಚಿಕೆಯಾಗುತ್ತದೆ.
ಬಿಜೆಪಿ ಆಡಳಿತದಲ್ಲಿ ಚಾಣಕ್ಯ ವಿವಿಗೆ ಜಾಗ
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆಯನ್ನು ಬರೀ 50 ಕೋಟಿ ರೂ.ಗೆ ನೀಡಲಾಗಿದೆ, ಇದರಿಂದ 137 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗಿದೆ, ಲೆಹರ್ ಸಿಂಗ್ ಅವರು ಈ ಬಗ್ಗೆ ಮಾತನಾಡಬಹುದಲ್ಲವೇ ಎಂದು ಪ್ರಶ್ನಿಸಿದರು.
ಈ ಮೊದಲು ಕೆಐಎಡಿಬಿ ಮಂಡಳಿಯೇ ಸಿಎ ನಿವೇಶನಗಳ ಹಂಚಿಕೆ ಮಾಡುತ್ತಿತ್ತು, ತಾವು ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ನೀಡುವ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ, ಮೊದಲ ಬಾರಿಗೆ ಸಿಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ.24.10 ಮೀಸಲಾತಿ ಕಲ್ಪಿಸಲಾಗಿದೆ, ಲೆಹರ್ ಸಿಂಗ್ ಈ ಸತ್ಯ ಅರಿತು ಮಾತನಾಡುವುದು ಒಳ್ಳೆಯದು ಎಂದರು.