ಬೆಂಗಳೂರು:ಜಮೀನು ಮಾಲಿಕತ್ವದ ಸುರಕ್ಷತೆ ಹಾಗೂ ವಂಚನೆ ಪ್ರಕರಣಗಳನ್ನು ತಪ್ಪಿಸಲು ಇನ್ನು ಮುಂದೆ ಆಸ್ತಿ ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ದಾಖಲೆ ಕಡ್ಡಾಯಗೊಳಿಸಿ ಸರ್ಕಾರ ಇಂದಿಲ್ಲಿ ಆದೇಶ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲೆಯ ಯಾವುದೇ ನೋಂದಣಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ ಮಾಡಕೊಡಲಾಗುತ್ತಿದೆ ಎಂದರು.
ನೋಂದಣಿ ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಪಾಸ್‌ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ದಾಖಲೆಗಳನ್ನು ಒದಗಿಸಿದರಷ್ಟೇ ನೋಂದಣಿ ಮಾಡಲಾಗುತ್ತದೆ.
ಮಾಲೀಕತ್ವ ಸುರಕ್ಷತೆ
ಆಸ್ತಿ ಮಾಲೀಕತ್ವ ಸುರಕ್ಷತೆ ಮಾಡುವುದು, ದರೋಡೆ ತಪ್ಪಿಸುವ ಉದ್ದೇಶದಿಂದ ಈ ದಾಖಲೆಗಳನ್ನು ಕಡ್ಡಾಯ ಮಾಡಲಾಗಿದೆ.
ರಾಜ್ಯದಲ್ಲಿ ಶೇಕಡ 99.99 ಮಂದಿ ಬಳಿ ಆಧಾರ್ ಕಾರ್ಡ್ ಇದೆ, ಈ ದಾಖಲೆ ಇಲ್ಲದವರು, ಮೇಲೆ ನಮೂದಿಸಲಾದ ಮೂರರಲ್ಲಿ ಯಾವುದಾದರೂ ಒಂದನ್ನು ದಾಖಲೆಯನ್ನು ಒದಗಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಯಾರದೋ ಜಮೀನನ್ನು ಯಾರಿಗೋ ಮಾರಾಟ ಮಾಡಿ ಮೂಲ ಮಾಲೀಕರು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ, ಇದನ್ನು ತಪ್ಪಿಸುವ ಉದ್ದೇಶದಿಂದಲೇ ನಾವು ಕೆಲವು ಕಠಿಣ ಕಗ್ರಮಗಳನ್ನು ಕೈಗೊಳ್ಳುತ್ತಿದ್ದು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಗೂಂಡಾ ವರ್ತನೆ ವಿರುದ್ಧ ಕ್ರಮ
ಜಮೀನುಗಳನ್ನು ದೋಚಿ ಗೂಂಡಾ ವರ್ತನೆ ಮಾಡುವವರ ವಿರುದ್ಧ ಇನ್ನು ಮುಂದೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ನಾಗರಿಕರ ಅನುಕೂಲಕ್ಕಾಗಿ ಆಯಾ ಜಿಲ್ಲೆಯಲ್ಲಿರುವ ಯಾವುದೇ ನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡುವ ಹಾಗೂ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.
ರಾಜ್ಯದಲ್ಲಿ 257 ನೋಂದಣಿ ಕಚೇರಿಗಳಿದ್ದು ಅದರಲ್ಲಿ 50 ಕಚೇರಿಗಳಲ್ಲಷ್ಟೇ ಹೆಚ್ಚು ಕೆಲಸದ ಒತ್ತಡ ಇದೆ, ಉಳಿದೆಡೆ ಅಂತಹ ಒತ್ತಡಗಳಿಲ್ಲ.
ನಾಗರಿಕರು ನೋಂದಣಿಗಾಗಿ ಕಾಯುವ ಬದಲು, ಎಲ್ಲಿ ಒತ್ತಡ ಇಲ್ಲವೋ ಅಂತಹ ಕಡೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.