ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುಟುಂಬಕ್ಕೆ ಪಡೆದಿರುವ 14 ನಿವೇಶನಗಳನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ.
ಸರ್ಕಾರ ಅಷ್ಟೇ ಅಲ್ಲ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಂಡಳಿ ಸಭೆಯಲ್ಲೂ ಇದಕ್ಕೆ ಅನುಮೋದನೆ ನೀಡಿಲ್ಲ ಎಂದಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರ ಭೇಟಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಮುಡಾ ಅಧ್ಯಕ್ಷರಾಗಿದ್ದ ರಾಜೀವ್, ನಮ್ಮ ಪಕ್ಷದವರೇ ಆಗಿದ್ದರೂ ಅವರು ಮುಖ್ಯಮಂತ್ರಿ ಆಪ್ತ ಸ್ನೇಹಿತರು.
ಮುಡಾ ಅನುಮತಿಯೂ ಇಲ್ಲ
ಸರ್ಕಾರ ಮತ್ತು ಮುಡಾ ಮಂಡಳಿ ಅನುಮತಿ ನೀಡದೆ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಈ ನಿವೇಶನಗಳು ಹೇಗೆ ದೊರೆತವು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು, 14 ನಿವೇಶನಗಳು ತಮ್ಮ ಕುಟುಂಬಕ್ಕೆ ಬರುವುದನ್ನು ತಿಳಿದಿದ್ದರೂ ಅಂದು ಅವರು ಅದನ್ನು ತಡೆಯಲು ಪ್ರಯತ್ನಿಸಲಿಲ್ಲ.
ಆ ಜಮೀನೇ ಮುಡಾಗೆ ಸೇರಿದ್ದೋ ಅಥವಾ ದೇವರಾಜ್ ಎಂಬ ವ್ಯಕ್ತಿಗೆ ಸೇರಿದ್ದೋ ಎಂಬ ಬಗ್ಗೆ ದಾಖಲೆಗಳಲ್ಲೇ ಗೊಂದಲ ಇದೆ.
ಎಲ್ಲ ತಿಳಿದೂ ಸಿದ್ದರಾಮಯ್ಯ ಮೌನ
ಇದೆಲ್ಲವನ್ನೂ ತಿಳಿದಿದ್ದರೂ ತಮ್ಮ ಕುಟುಂಬಕ್ಕೆ ಬೆಲೆ ಬಾಳುವ ನಿವೇಶನಗಳು ಬಂದರೆ ಬರಲಿ ಎಂದು ಸಿದ್ದರಾಮಯ್ಯ ಮೌನ ವಹಿಸಿದ್ದರು.
ಹಗರಣದಲ್ಲಿ ಮುಖ್ಯಮಂತ್ರಿ ಅವರು ಸಿಲುಕಿದ್ದಾರೆ, ನ್ಯಾಯಾಲಯದ ತೀರ್ಪು ಬರುವುದಕ್ಕೂ ಮುನ್ನವೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಗರಣಗಳಲ್ಲೇ ಮುಳುಗಿದೆ, ಅಭಿವೃದ್ಧಿ ಮಾಡುವುದಿರಲಿ, ಅಭಿವೃದ್ಧಿ ಕೆಲಸವನ್ನೇ ಆರಂಭಿಸಿಲ್ಲ, ಗ್ಯಾರಂಟಿ ಗುಮ್ಮವನ್ನು ಇಟ್ಟುಕೊಂಡು ಸರ್ಕಾರವೇ ಸ್ಥಗಿತಗೊಂಡಿದೆ.
ಸರ್ಕಾರ ಆರ್ಥಿಕ ಮುಗ್ಗಟ್ಟಿನಲ್ಲಿ
ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಈ ಸರ್ಕಾರದಿಂದ ಬೇಸತ್ತ ಸಚಿವರುಗಳೂ ತಮ್ಮ ಇಲಾಖೆ ಕೆಲಸ-ಕಾರ್ಯ ಮಾಡುವುದನ್ನು ಬಿಟ್ಟಿದ್ದಾರೆ, ಶಾಸಕರು, ಮುಖ್ಯಮಂತ್ರಿಯಿಂದ ದೂರ ಸರಿಯುತ್ತಿದ್ದಾರೆ.
ಕರ್ನಾಟಕ ರಸ್ತೆ ಸಾರಿಗೆ ನಿಗಮ ನಷ್ಟದಿಂದ ಬಳಲುತ್ತಿದ್ದು ಇನ್ನು ಎರಡು-ಮೂರು ತಿಂಗಳಲ್ಲೇ ಮುಚ್ಚುವ ಹಂತ ತಲುಪಲಿದೆ.
ಶಕ್ತಿ ಯೋಜನೆ ಜಾರಿ ನಂತರ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ನೀಡಬೇಕಿದ್ದ 4,000 ಕೋಟಿ ರೂ. ನೀಡದಿರುವುದರಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ.
ಇಬ್ಬರು ಶಾಸಕರಿಗೆ ಕ್ಲೀನ್‌ಚಿಟ್
ಹಿಂದುಳಿದವರ ಮತ್ತು ಪರಿಶಿಷ್ಟರ ಹಣ ನುಂಗುವ ಈ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪಾಲುದಾರರಾದ ಕಾಂಗ್ರೆಸ್‌ನ ಇಬ್ಬರು ಶಾಸಕರಿಗೆ ಕ್ಲೀನ್‌ಚಿಟ್ ನೀಡಿದೆ.
ಅವರಿಗೆ ಕ್ಲೀನ್‌ಚಿಟ್ ನೀಡದಿದ್ದರೆ, ಹಗರಣ ಮುಖ್ಯಮಂತ್ರಿ ಅವರ ಬುಡಕ್ಕೇ ಬರುತ್ತಿತ್ತು, ಇದನ್ನು ಅರಿತೇ ಎಸ್‌ಐಟಿ ತನಿಖಾ ತಂಡ ಸರ್ಕಾರ ಹೇಳಿದಂತೆ ವರದಿ ನೀಡಿ ಅವರನ್ನು ರಕ್ಷಿಸಿದೆ ಎಂದರು.