ಬೆಂಗಳೂರು: ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಬರುವ ಸಂಬಂಧ ನಮ್ಮ ಬಳಿ ಯಾರೂ ಚರ್ಚೆ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಅಭ್ಯರ್ಥಿ ನಾನೇ, ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ನನಗೇ ಮತ ಹಾಕಿದಂತೆ, ಕೆಪಿಸಿಸಿ ಅಧ್ಯಕ್ಷನಾಗಿ ’ಬಿ’ ಫಾರಂ ಬರೆಯುವುದು, ಅದಕ್ಕೆ ಸಹಿ ಹಾಕುವುದು ನಾನು, ಮಾಧ್ಯಮದವರನ್ನು ಸ್ಪರ್ಧೆಗಿಳಿಸಿದರೂ, ಅವರು ಪರ ಚಲಾವಣೆಯಾಗುವ ಮತಗಳೂ ನನ್ನದೇ ಎಂದರು.
ಮತದಾರರು ತೀರ್ಮಾನ ಮಾಡುತ್ತಾರೆ
ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಇರಲಿ ಅಥವಾ ಮೂರು ಪಕ್ಷವಾದರೂ ಇರಲಿ, ನಮಗೆ ಸಂಬಂಧವಿಲ್ಲ, ನಾವು ಜನ ಸೇವೆ ಮಾಡುತ್ತೇವೆ, ಮತದಾರರು ತೀರ್ಮಾನ ಮಾಡುತ್ತಾರೆ.
ಚನ್ನಪಟ್ಟಣ ಉಪಚುನಾವಣೆ ದೃಷ್ಟಿಯಿಂದ ಉದ್ಯೋಗ ಮೇಳ ನಡೆಸುತ್ತಿಲ್ಲ, ಆ ಭಾಗದ ಯುವಜನರಿಗೆ ಕೆಲಸ ಕೊಡಿಸುವುದು ನಮ್ಮ ಉದ್ದೇಶ, ನಾನು ಜಿಲ್ಲೆಗೆ ಹೋದಾಗಲೆಲ್ಲಾ ಕೆಲಸ ಕೊಡಿಸಿ ಎಂದು ಯುವಜನರು ಅರ್ಜಿ ನೀಡುತ್ತಿದ್ದರು, ನಮಗೆ ಅರ್ಜಿ ಕೊಟ್ಟವರನ್ನೂ ಉದ್ಯೋಗ ಮೇಳಕ್ಕೆ ಕರೆಸುತ್ತಿದ್ದೇವೆ, ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.
ಶನಿವಾರ ರಾಜ್ಯಪಾಲರ ಭೇಟಿಗೆ ಅವಕಾಶ ದೊರೆತಿದ್ದು, ನಮ್ಮ ಮನವಿಯನ್ನು ಸಲ್ಲಿಸುತ್ತೇವೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಮೊಕದ್ದಮೆ ನ್ಯಾಯಾಲಯದ ಮುಂದಿದೆ, ತೀರ್ಪಿನ ನಂತರ ಮಾತನಾಡುತ್ತೇನೆ ಎಂದರು.