ಬೆಂಗಳೂರು:ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಿರಂತರ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆರೋಪಿಸಿದ್ದಾರೆ.
ಅವರು ಸರ್ಕಾರ ರಚಿಸಬೇಕೆಂದರೆ, ಕಾಂಗ್ರೆಸ್‌ನ 60 ಶಾಸಕರನ್ನು ಸೆಳೆಯಬೇಕು, ಅದು ಸಾಧ್ಯವಿಲ್ಲ ಎಂದರು.
ಮನೆ ಬಾಗಿಲು ತಟ್ಟುತ್ತಿದ್ದಾರೆ
ಆ ಪಕ್ಷದ ಕೆಲವು ಮುಖಂಡರು ನಮ್ಮ ಸದಸ್ಯರ ಮನೆ ಬಾಗಿಲು ತಟ್ಟುತ್ತಿದ್ದಾರೆ, ಕಾಂಗ್ರೆಸ್‌ನ ಯಾವ ಶಾಸಕರೂ ದುಡ್ಡಿನ ಆಸೆಗೆ ಬಲಿಯಾಗುವುದಿಲ್ಲ ಎಂದರು.
ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ, ಅವರು ಆಪರೇಷನ್ ಕಮಲದ ಮೂಲಕವೇ ನಾಲ್ಕು ಬಾರಿ ಸರ್ಕಾರ ರಚನೆ ಮಾಡಿದ್ದಾರೆ.
ಈಗ ಮತ್ತೆ ಪ್ರಯತ್ನ ಮಾಡುತ್ತಿದ್ದರೂ ಶಾಸಕರು ಅವಕಾಶ ನೀಡುತ್ತಿಲ್ಲ, ಇದರಿಂದ ಬೇಸರಗೊಂಡು ನನ್ನ ವಿರುದ್ಧವೇ ಭ್ರಷ್ಟಾಚಾರ ಆರೋಪ ಹೊರಿಸಿ ರಾಜಭವನವನ್ನು ದುರುಪಯೋಗ ಪಡಿಸಿಕೊಂಡು ಪ್ರಕರಣವನ್ನು ಪ್ರಾಸಿಕ್ಯೂಷನ್‌ಗೆ ಕೊಡಿಸಿದ್ದಾರೆ.
ಅಧಿಕಾರದಿಂದ ಕೆಳಗಿಳಿಸಲು ಯತ್ನ
ಇದರ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಬಿಜೆಪಿ ಮತ್ತು ಜೆಡಿಎಸ್ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ ಎಂದರು.
ನನ್ನ ವಿರುದ್ಧ ನಾಗರಿಕರೊಬ್ಬರು ದೂರು ನೀಡಿದ ತಕ್ಷಣ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಆದೇಶ ಮಾಡುತ್ತಾರೆ, ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು ತನಿಖೆ ನಡೆಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದರೂ ರಾಜಭವನ ಅನುಮತಿ ನೀಡಿಲ್ಲ.
ಇದು ಏನು ಹೇಳುತ್ತದೆ, ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ನಡೆಸುತ್ತಿರುವ ಹುನ್ನಾರವಲ್ಲವೇ ಎಂದು ಪ್ರಶ್ನಿಸಿದರು.
ಕರ್ತವ್ಯ ಲೋಪ
ಸುದ್ದಿಗಾರರೊಂದಿಗೆ ಮಾತನಾಡಿ, ನಟ ದರ್ಶನ್ ವಿಚಾರ ಪ್ರಸ್ತಾಪಿಸಿದ ಅವರು, ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಜೊತೆಗೆ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನೂ ರಾಜ್ಯದ ವಿವಿಧ ಜೈಲುಗಳಿಗೆ ಕಳುಹಿಸಲಾಗಿದ್ದು, ಜೈಲಿನ ಡಿಜಿಪಿಗೂ ನೋಟಿಸ್ ನೀಡಲಾಗಿದೆ ಎಂದರು.
ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಮುಡಾದ ಮಾಜಿ ಆಯುಕ್ತರನ್ನು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ ಮಾಡಿರುವ ವಿಚಾರ ಕುರಿತು ಮಾಹಿತಿ ಪಡೆಯುವುದಾಗಿ ತಿಳಿಸಿದರು.